ಬಿಜೆಪಿಯ ಗುರಿ ನಾನು, ಶೇಕಡ 35ರಷ್ಟು ಮತ ತಿರುಗಿಸಬಲ್ಲೆ: ಮೌಲಾನಾ ಬದ್ರುದ್ದೀನ್ ಅಜ್ಮಲ್

ಎಐಯುಡಿಎಫ್ ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್ (Photo:PTI)
ಗುವಾಹತಿ, ಮಾ.14: ಅಸ್ಸಾಂನಲ್ಲಿ ಬಿಜೆಪಿಯ ಮುಖ್ಯ ಗುರಿ ನಾನು. ಏಕೆಂದರೆ ನಾನು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಶೇಕಡ 35ರಷ್ಟು ಮತಗಳನ್ನು ತಿರುಗಿಸಬಲ್ಲೆ ಎಂದು ಎಐಯುಡಿಎಫ್ ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.
"ನಾನು ಬಿಜೆಯ ಗುರಿ ಮಾತ್ರ ಅಲ್ಲ; ರಾಜಕೀಯವಾಗಿ ನನ್ನನ್ನು ಮುಗಿಸಲು ಅವರು ಬಯಸಿದ್ದಾರೆ. ಶೇಕಡ 35ರಷ್ಟು ಮತಗಳ ಮೇಲೆ ನನಗೆ ಹಿಡಿತ ಇದೆ ಎನ್ನುವುದು ಅವರಿಗೆ ಗೊತ್ತು. ನಾನು ನನ್ನ ವಿಧಾನದಲ್ಲಿ ಕೆಲಸ ಮಾಡಿದರೆ ಅವರು ಅಧಿಕಾರದಲ್ಲಿ ಉಳಿಯಲು ಸಾಧ್ಯವೇ ಇಲ್ಲ. ಈ ಮತಗಳನ್ನು ನಾನು ಕಾಂಗ್ರೆಸ್ ಮೈತ್ರಿಕೂಟದ ಪರವಾಗಿ ತಿರುಗಿಸಬಲ್ಲೆ" ಎಂದು ಎನ್ಡಿಟಿವಿ ಜತೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.
ಮಹಾ ಮೈತ್ರಿಕೂಟದಲ್ಲಿ ಎಐಯುಡಿಎಫ್ 19 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದೇ ಮೊದಲ ಬಾರಿಗೆ ತನ್ನ ಮಾಜಿ ಎದುರಾಳಿ ಕಾಂಗ್ರೆಸ್ ಪಕ್ಷದ ಜತೆ ಎಐಯುಡಿಎಫ್ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದೆ. 2016ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಐಯುಡಿಎಫ್ ನಡುವೆ ಮತ ವಿಭಜನೆಯಿಂದಾಗಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಬಿಜೆಪಿಯ ಚುನಾವಣಾ ಪ್ರಚಾರದ ಬಹುತೇಕ ಭಾಗ ಅಜ್ಮಲ್ ಅವರ ಟೀಕೆಗೆ ಮೀಸಲಾಗಿದೆ. ಸುಗಂಧ ದ್ರವ್ಯ ಉದ್ಯಮದ ದಿಗ್ಗಜ ಹಾಗೂ ಧರ್ಮಗುರುವೂ ಆಗಿರುವ ಅಜ್ಮಲ್ ಹಾಗೂ ಅವರ ಪಕ್ಷವನ್ನು ಕೋಮುವಾದಿ ಹಾಗೂ ಅಕ್ರಮ ಬಾಂಗ್ಲಾದೇಶಿಯರ ಸಂರಕ್ಷಕ ಎಂದು ಬಿಜೆಪಿ ಆಪಾದಿಸಿದೆ.
"ನನ್ನ ಹಿಂದಿನ ಉಪನ್ಯಾಸಗಳನ್ನು ಕೇಳಿ. ನನ್ನ ನಿಲುವು ಸ್ಪಷ್ಟವಾಗುತ್ತದೆ. ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಿ. ಕಳೆದ 60 ವರ್ಷಗಳಲ್ಲಿ ಅಸ್ಸಾಂನಲ್ಲಿ ಅಧಿಕಾರ ಪಡೆಯುವ ಸಲುವಾಗಿ ಬಾಂಗ್ಲಾದೇಶೀಯರ ಹೆಸರಿನಲ್ಲಿ ರಾಜಕೀಯ ಆಟ ನಡೆದಿದೆ" ಎಂದು ಅಜ್ಮಲ್ ಹೇಳಿದ್ದಾರೆ.







