ಮಮತಾ ಬ್ಯಾನರ್ಜಿಗೆ ಆಗಿರುವ ಗಾಯ ಆಕಸ್ಮಿಕ, ಯೋಜಿತ ಕೃತ್ಯವಲ್ಲ
ಚುನಾವಣಾ ವೀಕ್ಷಕರ ವರದಿಯಲ್ಲಿ ಉಲ್ಲೇಖ

ಕೋಲ್ಕತಾ,ಮಾ.13: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ನಂದಿಗ್ರಾಮದಲ್ಲಿ ಗಾಯಗೊಂಡಿದ್ದು ಒಂದು ಆಕಸ್ಮಿಕ ಘಟನೆ ಯಾಗಿದ್ದು, ಅದೊಂದು ಯೋಜಿತ ದಾಳಿಯಲ್ಲವೆಂದು ಚುನಾವಣಾ ಆಯೋಗದ ಮೂಲಗಳು ರವಿವಾರ ತಿಳಿಸಿವೆ.
ನಂದಿಗ್ರಾಮದ ಘಟನೆಗೆ ಸಂಬಂಧಿಸಿ ಇಬ್ಬರು ಚುನಾವಣಾ ವೀಕ್ಷಕರು ಶನಿವಾರ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಬಳಿಕ ಆಯೋಗವು ಈ ನಿರ್ಧಾರಕ್ಕೆ ಬಂದಿದೆ ಎಂದು ಅವು ಹೇಳಿವೆ.
ತನ್ನ ಭದ್ರತಾ ಉಸ್ತುವಾರಿ ಅಧಿಕಾರಿಯ ಕರ್ತವ್ಯಲೋಪದ ಕಾರಣದಿಂದಾಗಿ ಮಮತಾ ಬ್ಯಾನರ್ಜಿ ಗಾಯಗೊಂಡರೆಂದು ಆಯೋಗವು ಅಭಿಪ್ರಾಯಿಸಿದೆ. ಈ ಬಗ್ಗೆ ಚುನಾವಣಾ ಆಯೋಗವು ನಿರ್ದೇಶನವೊಂದನ್ನು ಕೂಡಾ ಹೊರಡಿಸಿದೆಯೆಂದು ಅವು ಹೇಳಿವೆ.
ಮಮತಾ ಬ್ಯಾನರ್ಜಿಯವರು ಪ್ರಮುಖ ಚುನಾವಣಾ ಪ್ರಚಾರಕರಾಗಿದ್ದರೂ ಘಟನೆ ನಡೆದ ವೇಳೆ ಆರು ಗುಂಡು ನಿರೋಧಕ ಕವಚ (ಬುಲೆಟ್ ಪ್ರೂಫ್) ಅಥವಾ ಕವಚಾವೃತ ವಾಹನವನ್ನಾಗಲಿ ಬಳಸಿರಲಿಲ್ಲವೆಂದು ಆಯೋಗ ಹೇಳಿದೆ.
ಘಟನೆ ನಡೆದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು ಸಾಮಾನ್ಯ ವಾಹನವನ್ನು ಬಳಸಿದ್ದರೆ, ಆಕೆಯ ಭದ್ರತಾ ನಿರ್ದೇಶಕ ವಿವೇಕ್ ಸಹಾಯ್ ಅವರು ಬುಲೆಟ್ ಪ್ರೂಫ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ವಿಶೇಷ ಚುನಾವಣಾ ವೀಕ್ಷಕರಾದ ಅಜಯ್ ನಾಯಕ್ ಹಾಗೂ ವಿವೇಕ್ ದುಬೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಮಮತಾ ಅವರ ಕಾರ್ಯಕ್ರಮ ನಡೆಸಲು ಆ ಪ್ರದೇಶದ ಚುನಾವಣಾ ಅಧಿಕಾರಿಯಿಂದ ಅನುಮೋದನೆಯನ್ನು ಪಡೆದು ಕೊಂಡಿರಲಿಲ್ಲ. ಇದರಿಂದಾಗಿ ಚುನಾವಣಾ ಅಧಿಕಾರಿಗಳಿಗೆ ವಿಡಿಯೋಗ್ರಾಫರ್‌ಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಲು ಸಾಧ್ಯವಾಗಲಿಲ್ಲವೆಂದು ಅವು ಹೇಳಿವೆ.
ಪೂರ್ವ ಮಿಡ್ನಾಪೂರ ಜಿಲ್ಲೆಯ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರು ನಾಮಪತ್ರ ಸಲ್ಲಿಸಿದ ಬಳಿಕ ಕಾರನ್ನು ಹತ್ತುತ್ತಿದ್ದಾಗ ನೂಕುನುಗ್ಗಲು ಉಂಟಾಗಿ ಅವರು ಕೆಳಗೆ ಬಿದ್ದು, ಕಾಲಿಗೆ ಪೆಟ್ಟಾಗಿತ್ತು. ಆನಂತರ ಮಮತಾ ಬ್ಯಾನರ್ಜಿ ಸೇರಿದಂತೆ ಟಿಎಂಸಿ ನಾಯಕರು ಇದು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯವೆಂದು ಆಪಾದಿಸಿ ದ್ದರು.ಆನಂತರ ಮಮತಾ ತನ್ನ ಹೇಳಿಯಿಂದ ದೂರಸರಿದಿದ್ದರು.
ಈ ಘಟನೆಯು ಯೋಜಿತ ದಾಳಿಯಾಗಿರಲಿಲ್ಲ, ಅದು ಆಕಸ್ಮಿಕವಾಗಿ ನಡೆದಿತ್ತು ಎಂದು ಸಮಿತಿಯ ವರದಿಯನ್ನು ಉಲ್ಲೇಖಿಸಿ ಚುನಾವಣಾ ಆಯೋಗ ತಿಳಿಸಿದೆ.
ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಒದಗಿಸಿದ ವಿವರಗಳನ್ನು ಕೂಡಾ ವರದಿಯಲ್ಲಿ ತಿಳಿಸಲಾಗಿದೆ.
ಸ್ಥಳೀಯ ಪೊಲೀಸರು ಹಾಗೂ ಮುಖ್ಯಮಂತ್ರಿಯವರ ಭದ್ರತಾ ಸಿಬ್ಬಂದಿ ಜನಜಂಗುಳಿಯನ್ನು ನಿಯಂತ್ರಿಸಲು ವಿಫಲರಾದರು, ಇದು ಅಹಿತಕರ ಘಟನೆಗೆ ಕಾರಣವಾಯಿತೆಂದು ಚುನಾವಣಾ ಆಯೋಗದ ಮೂಲಗಳು ವರದಿಯನ್ನು ಉಲ್ಲೇಖಿಸಿ ತಿಳಿಸಿವೆ.







