ಆತ್ಮಹತ್ಯೆಗೂ ಮುಂಚೆ ಮೋದಿ, ಅಮಿತ್ ಶಾ ಗೆ ಹಲವು ಬಾರಿ ಸಹಾಯ ಕೋರಿ ಪತ್ರ ಬರೆದಿದ್ದ ಸಂಸದ ಮೋಹನ್ ಡೆಲ್ಕರ್
ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್

ಮುಂಬೈ: ಕಳೆದ ತಿಂಗಳು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ್ ಡೆಲ್ಕರ್ ಅವರು ಆತ್ಮಹತ್ಯೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಹಾಯ ಕೋರಿ ಅನೇಕ ಪತ್ರಗಳನ್ನು ಬರೆದಿದ್ದರು ಎಂದು ಕಾಂಗ್ರೆಸ್ ಹೇಳಿಕೆ ನೀಡಿದೆ.
ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಚಿನ್ ಸಾವಂತ್, ಬಿಜೆಪಿ ನಾಯಕರು ಮತ್ತು ಕೇಂದ್ರದ ಅಧಿಕಾರಿಗಳ ಕಿರುಕುಳದಿಂದಾಗಿ ಮೋಹನ್ ಡೆಲ್ಕರ್ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದ ಅವರು ಈ ಪ್ರಕರಣವು "ಪ್ರಜಾಪ್ರಭುತ್ವಕ್ಕೆ ದುರಂತ" ಎಂದು ಹೇಳಿದ್ದಾರೆ.
"ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಸಹಾಯ ಕೋರಿ ಅನೇಕ ಬಾರಿ ಪತ್ರಗಳನ್ನು ಬರೆದಿದ್ದಾರೆ. ಇದು ಡೆಲ್ಕರ್ ರ ಜೀವನ ಮತ್ತು ಸಾವಿನ ವಿಷಯವಾಗಿತ್ತು. ಪ್ರಧಾನಿ ಮತ್ತು ಗೃಹ ಸಚಿವರು ತಕ್ಷಣವೇ ಡೆಲ್ಕರ್‌ಗೆ ಸಹಾಯ ಮಾಡಬಹುದಿತ್ತು ಅವರು ಉದ್ದೇಶಪೂರ್ವಕವಾಗಿ ಅವರ ಪತ್ರಗಳನ್ನು ನಿರ್ಲಕ್ಷಿಸಿದ್ದಿರಬಹುದೇ? ಎನ್ನುವುದು ನಮ್ಮ ಪ್ರಶ್ನೆ "ಎಂದು ಸಾವಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾಗಿರುವ ದಾದ್ರಾ ಮತ್ತು ನಗರ ಹವೇಲಿಯ ಆಡಳಿತಾಧಿಕಾರಿ ಪ್ರಫುಲ್ ಖೇಡಾ ಪಟೇಲ್ ಮತ್ತು ಹಲವಾರು ಕೇಂದ್ರ ಅಧಿಕಾರಿಗಳು ಡೆಲ್ಕರ್ ರಿಗೆ ಕಿರುಕುಳ ನೀಡಿ ಅವಮಾನಿಸಿದ್ದಾರೆ ಎಂದು ಸಾವಂತ್ ಆರೋಪಿಸಿದ್ದಾರೆ.
"ಅವರು ಯಾವುದೇ ಸಂಬಂಧವಿಲ್ಲದ ಅಪರಾಧಗಳಲ್ಲಿ ತಮ್ಮನ್ನು ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದರು" ಎಂದು ಸಾವಂತ್ ಹೇಳಿಕೆ ನೀಡಿದ್ದಾರೆ.







