ಮಾಂಸಾಹಾರಿ ಪಿಝ್ಝಾ ಪೂರೈಸಿದ ರೆಸ್ಟೊರೆಂಟ್: 1 ಕೋಟಿ ರೂ.ಪರಿಹಾರ ಕೇಳಿದ ಗ್ರಾಹಕಿ

ಸಾಂದರ್ಭಿಕ ಚಿತ್ರ (eatgood4life.com)
ಹೊಸದಿಲ್ಲಿ: ಗಾಝಿಯಾಬಾದ್ ನ ಸಸ್ಯಾಹಾರಿ ಮಹಿಳೆಗೆ ಅಮೆರಿಕದ ರೆಸ್ಟೊರೆಂಟ್ ವೊಂದು ಮಾಂಸಾಹಾರಿ ಪಿಝ್ಝಾವನ್ನು ಪೂರೈಸಿದ್ದು, ಇದೀಗ ಆ ಮಹಿಳೆಯು 1 ಕೋಟಿ ರೂ. ಪರಿಹಾರವನ್ನು ಕೋರಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತನಗೆ ಆಗಿರುವ ಹಾನಿಯನ್ನು ಸರಿಪಡಿಸಲು ಕಠಿಣ ಹಾಗೂ ದುಬಾರಿ ಆಚರಣೆಗಳನ್ನು ಮಾಡಬೇಕಾಗುತ್ತದೆ ಎಂದು ಮಹಿಳೆ ಹೇಳಿದ್ದಾರೆ.
ತನ್ನ ಧಾರ್ಮಿಕ ನಂಬಿಕೆಗಳು, ಬೋಧನೆಗಳು, ಕುಟುಂಬ ಸಂಪ್ರದಾಯಗಳು, ಸ್ವಂತ ಮನಸಾಕ್ಷಿ ಹಾಗೂ ಅತ್ಯುತ್ತಮ ಆಯ್ಕೆಯಿಂದಾಗಿ ತಾನು ಶುದ್ಧ ಸಸ್ಯಾಹಾರಿಯಾಗಿದ್ದೆ. ಈಗ ಮಾಂಸಾಹಾರಿ ಪಿಝ್ಝಾವನ್ನು ಕಚ್ಚಿದ್ದಕ್ಕೆ ಎಲ್ಲವೂ ಹಾನಿಯಾಗಿದೆ ಎಂದು ದೀಪಾಲಿ ತ್ಯಾಗಿ ಎಂಬ ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.
2019ರ ಮಾರ್ಚ್ 21ರಂದು ಹೋಳಿ ಹಬ್ಬ ಆಚರಿಸಿದ ಬಳಿಕ ಉತ್ತರಪ್ರದೇಶದ ಗಾಝಿಯಾಬಾದ್ ನ ಪಿಝ್ಝಾ ಮಳಿಗೆಯಿಂದ ದೀಪಾಲಿ ಅವರು ಕುಟುಂಬ ಸದಸ್ಯರಿಗೆ ಸಸ್ಯಾಹಾರಿ ಪಿಝ್ಝಾಕ್ಕಾಗಿ ಆರ್ಡರ್ ಮಾಡಿದ್ದರು. ಪಿಝ್ಝಾವನ್ನು ತಡವಾಗಿ ಡೆಲಿವರಿ ಮಾಡಲಾಗಿತ್ತು. ಆದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಪಿಝ್ಝಾ ಮಾಂಸಾಹಾರಿ ಎಂದು ಗಮನಿಸದೇ ಅದನ್ನು ಸೇವಿಸಲು ಮುಂದಾಗಿದ್ದರು
ಪಿಝ್ಝಾವನ್ನು ಕಚ್ಚಿದ ನಂತರ ಮಶ್ರೂಮ್ ಬದಲಿಗೆ ಮಾಂಸದ ತುಂಡುಗಳಿವೆ ಎಂದು ದೀಪಾಲಿಗೆ ಗೊತ್ತಾಗಿತ್ತು. ದೀಪಾಲಿ ತಕ್ಷಣವೇ ಕಸ್ಡಮರ್ ಕೇರ್ ಗೆ ಕರೆ ಮಾಡಿದ್ದು, ಶುದ್ದ ಸಸ್ಯಾಹಾರಿ ಮನೆಗೆ ಮಾಂಸಾಹಾರಿ ಪಿಝ್ಝಾವನ್ನು ಪೂರೈಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ದೀಪಾಲಿ ಪರ ವಕೀಲ ಫರ್ಹತ್ ವರ್ಸಿ ತಿಳಿಸಿದ್ದಾರೆ.
ಕೆಲವು ದಿನಗಳ ಬಳಿಕ ಪಿಝ್ಝಾ ಮಳಿಗೆಯ ಮ್ಯಾನೇಜರ್ ದೀಪಾಲಿಗೆ ಕರೆ ಮಾಡಿ, ಇಡೀ ಕುಟುಂಬಕ್ಕೆ ಪಿಝ್ಜಾವನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಎಎನ್ ಐ ವರದಿ ತಿಳಿಸಿದೆ.
ಕಂಪೆನಿಯು ತನ್ನ ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳನ್ನು ಘಾಸಿಗೊಳಿಸಿರುವುದರಿಂದ ಹಾಗೂ ಶಾಶ್ವತ ಮಾನಸಿಕ ಸಂಕಟ ಉಂಟು ಮಾಡಿದ ಕಾರಣಕ್ಕೆ ಇದು ಸಣ್ಣ ಪ್ರಕರಣವಲ್ಲ್ಲ ಎಂದು ದೂರುಗಾರ್ತಿ ದೀಪಾಲಿ ಪುನರುಚ್ಚರಿಸಿದ್ದಾರೆ. ತಾನು ಹಲವಾರು ದೀರ್ಘ ಹಾಗೂ ದುಬಾರಿ ಆಚರಣೆಗಳನ್ನು ಮಾಡಬೇಕಾಗುತ್ತದೆ. ತನ್ನ ಇಡೀ ಜೀವನದಲ್ಲಿ ಲಕ್ಷಾಂತರ ಹಣ ವೆಚ್ಚವಾಗಲಿದೆ ಎಂದು ಹೇಳಿದ್ದರು.







