ಸಹಕಾರ ಸ್ಪಂದನ ಉದ್ಘಾಟನೆ ಮತ್ತು ಜಾಲತಾಣ ಲೋಕಾರ್ಪಣೆ

ಮಂಗಳೂರು, ಮಾ.14: ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ‘ಸ್ಪಂದನ’ದ ಉದ್ಘಾಟನೆ ಮತ್ತು ‘ಸಹಕಾರ ಸ್ಪಂದನ’ ಜಾಲತಾಣದ ಲೋಕಾರ್ಪಣೆಯು ರವಿವಾರ ನಗರದ ಕೊಡಿಯಾಲ್‌ಬೈಲ್‌ನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮೊಳಹಳ್ಳಿ ಶಿವರಾವ್ ಸಭಾಭವನದಲ್ಲಿ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಸಹಕಾರಿ ಸೇರಿದಂತೆ ಅನೇಕ ಸಂಸ್ಥೆಗಳು ಕುಂಟುತ್ತಾ ಸಾಗುತ್ತಿರುತ್ತವೆ. ಯಾರಿಂದ ಮಾರ್ಗದರ್ಶನ ಪಡೆಯಬೇಕು ಎಂಬುದರ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಅಂತಹ ಸಂಸ್ಥೆಗಳ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗದರ್ಶಕ ಸಂಸ್ಥೆಯಾಗಿ ‘ಸ್ಪಂದನ’ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.
ಯಾವುದೇ ಸಂಸ್ಥೆಯು ಬೆಳೆಯಬೇಕಾದರೆ ಅದರ ಅಗತ್ಯ ಏನಿದೆ ಎಂಬುದು ಮುಖ್ಯ. ಸಂಸ್ಥೆ ಸ್ಥಾಪನೆಗೊಂಡು ಅಷ್ಟೇ ವೇಗದಲ್ಲಿ ಮೂಲೆಗುಂಪಾಗಬಾರದು. ಈ ನಿಟ್ಟಿನಲ್ಲಿ ಸ್ಪಂದನ ಸಂಸ್ಥೆಯು ರಾಷ್ಟ್ರ ಮಟ್ಟದ ಸಂಸ್ಥೆಯಾಗಿ ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದು ರಾಜೇಂದ್ರ ಕುಮಾರ್ ಹೇಳಿದರು.
ದ.ಕ. ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಹೊಸತನ, ಶಕ್ತಿ ತುಂಬಲು ಇದು ಸಹಕಾರಿಯಾಗಲಿದೆ ಎಂದರು.
ವೇದಿಕೆಯಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕೊಡ್ಗಿ, ಸಹಕಾರ ಭಾರತಿ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ನಿರ್ದೇಶಕ ಮಂಜುನಾಥ್ ಎಸ್.ಕೆ., ಸ್ಪಂದನ ಅಧ್ಯಕ್ಷ ಹರೀಶ್ ಆಚಾರ್ಯ, ಕಾರ್ಯದರ್ಶಿ ಜಿತಿನ್ ಜಿಜೋ ಮತ್ತಿತರರು ಉಪಸ್ಥಿತರಿದ್ದರು.










