ನಾಲ್ಕನೇ ಬಾರಿ ವಿಜಯ ಹಝಾರೆ ಟ್ರೋಫಿ ಜಯಿಸಿದ ಮುಂಬೈ
ಆದಿತ್ಯ ತಾರೆ ಶತಕ, ಪೃಥ್ವಿ ಶಾ ಅರ್ಧಶತಕ

ಪೃಥ್ವಿ ಶಾ
ಹೊಸದಿಲ್ಲಿ: ಆದಿತ್ಯ ತಾರೆ ಸಿಡಿಸಿದ 91 ಎಸೆತಗಳ ಶತಕದ ನೆರವಿನಿಂದ ಮುಂಬೈ ತಂಡ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಉತ್ತರಪ್ರದೇಶವನ್ನು 6 ವಿಕೆಟ್ ಗಳ ಅಂತರದಿಂದ ಮಣಿಸಿ ನಾಲ್ಕನೇ ಬಾರಿ ವಿಜಯ ಹಝಾರೆ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಸರಣಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿರುವ ಪೃಥ್ವಿ ಶಾ 73 ರನ್ ಕೊಡುಗೆ ನೀಡುವ ಮೂಲಕ ಇತರ ದಾಂಡಿಗರಿಗೆ ಭದ್ರ ಬುನಾದಿ ಹಾಕಿಕೊಟ್ಟರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಮುಂಬೈ ತಂಡ ಉತ್ತರಪ್ರದೇಶವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತು. ಆರಂಭಿಕ ಆಟಗಾರರು ಎಚ್ಚರಿಕೆಯಿಂದ ಆಡಿದರು. ಮಾಧವ್ ಕೌಶಿಕ್ ಔಟಾಗದೆ 158 ರನ್ ಗಳಿಸಿ ವಿಜಯ ಹಝಾರೆ ಟ್ರೋಫಿ ಫೈನಲ್ ನಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದರು. ಉ.ಪ್ರದೇಶವು ಕೊನೆಯ 10 ಓವರ್ ಗಳಲ್ಲಿ 111 ರನ್ ಗಳಿಸಿತು. ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತು.
ಗೆಲ್ಲಲು 313 ರನ್ ಚೇಸಿಂಗ್ ಮಾಡಿದ ಮುಂಬೈ ತಂಡಕ್ಕೆ ನಾಯಕ ಪೃಥ್ವಿ ಶಾ 39 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಗಳ ಸಹಿತ 73 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಯಶಸ್ವಿ ಜೈಸ್ವಾಲ್ 30 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಆದಿತ್ಯ ತಾರೆ ಶತಕ ಸಿಡಿಸಿ ಮುಂಬೈಯನ್ನು ಗೆಲುವಿನತ್ತ ಮುನ್ನಡೆಸಿದರು. ಲಿಸ್ಟ್ ಎ ಕ್ರಿಕೆಟಿನಲ್ಲಿ ಚೊಚ್ಚಲ ಶತಕ ಸಿಡಿಸಿದ ತಾರೆ 107 ಎಸೆತಗಳಲ್ಲಿ18 ಬೌಂಡರಿಗಳ ಸಹಿತ 118 ರನ್ ಗಳಿಸಿದರು. ಮುಂಬೈ 41.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿ ಗೆಲುವಿನ ನಗೆ ಬೀರಿತು.







