ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣ: ರಮೇಶ್ ಜಾರಕಿಹೊಳಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ
''ಸರಕಾರ ತಮ್ಮವರ ರಕ್ಷಣೆಗೆ ನಿಂತಿದೆಯೇ ಹೊರತು ರಾಜ್ಯದ ಜನತೆಯ ರಕ್ಷಣೆಗಲ್ಲ''

ಬೆಂಗಳೂರು, ಮಾ. 14: ‘ಉದ್ಯೋಗ ಕೇಳಿ ಬಂದ ಯುವತಿಯನ್ನು ದುರ್ಬಳಕೆ ಮಾಡಿಕೊಂಡಿರುವುದು ಆಕೆಯ ಹೇಳಿಕೆಯಿಂದ ಸ್ಪಷ್ಟವಾಗಿದೆ. ವಿಡಿಯೋ ಬಿಡುಗಡೆ ಮಾಡಿದ್ದೇ ಮಹಾ ಅಪರಾಧ ಎನ್ನುವುದನ್ನು ಬಿಟ್ಟು ರಾಜ್ಯ ಬಿಜೆಪಿ ಸರಕಾರಕ್ಕೆ ಮಹಿಳೆಯರ ಬಗ್ಗೆ ಗೌರವವಿದ್ದರೆ ಯುವತಿಯ ಶೋಷಣೆ ಮಾಡಿದ ರಮೇಶ್ ಜಾರಕಿಹೊಳಿಯವರ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ, ಬಂಧಿಸಿ ತನಿಖೆ ನಡೆಸಬೇಕು' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಆಗ್ರಹಿಸಿದೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ವಿಡಿಯೋ ಬಿಡುಗಡೆ ಮಾಡಿದ್ದು ರಮೇಶ್ ಜಾರಕಿಹೊಳಿಯವರೇ ಎಂದು ಯುವತಿಯೇ ನೇರವಾಗಿ ಆರೋಪಿಸಿದ್ದಾಳೆ. ಗೃಹ ಇಲಾಖೆ ಮಾಜಿ ಸಚಿವರನ್ನ ಆ ಬಗ್ಗೆ ವಿಚಾರಣೆ ನಡೆಸದೆ ಇನ್ನೂ ಮೀನಾಮೇಷ ಏಣಿಸುತ್ತಿರುವುದೇಕೇ?. ಈ ಸರಕಾರ ತಮ್ಮವರ ರಕ್ಷಣೆಗೆ ನಿಂತಿದೆಯೇ ಹೊರತು ರಾಜ್ಯದ ಜನತೆಯ ರಕ್ಷಣೆಗಲ್ಲ ಎನ್ನುವುದು ಬಿಜೆಪಿ ನಡವಳಿಕೆಯಿಂದ ತಿಳಿಯುತ್ತಿದೆ' ಎಂದು ಆರೋಪಿಸಲಾಗಿದೆ.
‘ಯುವತಿ ಹಾಗೂ ಕುಟುಂಬಸ್ಥರಿಗೆ ಜೀವ ಬೆದರಿಕೆ ಇರುವುದು ಆಕೆಯ ಹೇಳಿಕೆಯಿಂದ ತಿಳಿಯುತ್ತದೆ. ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಯುವತಿ ಕೇಳಿಕೊಂಡಿದ್ದಾಳೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಆಕೆ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆಯ ವ್ಯವಸ್ಥೆ ಮಾಡಬೇಕು. ನೊಂದವರ ರಕ್ಷಣೆ ಗೃಹ ಸಚಿವರ ಜವಾಬ್ದಾರಿ. ಆದರೆ, ತಮ್ಮ ಪಕ್ಷದವರ ರಕ್ಷಣೆಯೇ ತಮಗೆ ಮುಖ್ಯ ಎಂಬಂತೆ ಗೃಹ ಸಚಿವರು ವರ್ತಿಸುತ್ತಿದ್ದೀರಿ' ಎಂದು ಕಾಂಗ್ರೆಸ್ ಟೀಕಿಸಿದೆ.
‘ಡಬಲ್ ಇಂಜಿನ್ ಸರಕಾರ, ಅಲ್ಲೂ ಬಿಜೆಪಿ ಇಲ್ಲೂ ಬಿಜೆಪಿ ಇದ್ದರೆ ಸ್ವರ್ಗವೇ ರಾಜ್ಯಕ್ಕೆ ಇಳಿಯಲಿದೆ ಎಂದಿದ್ದರು ಬಿಜೆಪಿ ನಾಯಕರು. ವಾಸ್ತವದಲ್ಲಿ ಎರಡೂ ಇಂಜಿನ್‍ಗಳು ಮೂರ್ಖರ ಕೈಯಲ್ಲಿ ಸಿಲುಕಿ ಡಕೋಟಾ ಇಂಜಿನ್ ಆಗಿವೆ! ಮೋದಿ ಸರಕಾರದಿಂದ ಅನ್ಯಾಯವಾದರೂ ಬಿಜೆಪಿ ಸರಕಾರ ಬಾಯಿ ಬಿಡುತ್ತಿಲ್ಲ. ರಾಜ್ಯದ ಅಭಿವೃದ್ಧಿ ಅವರಿಗೆ ಬೇಕಿಲ್ಲ'
-ಕಾಂಗ್ರೆಸ್, ಟ್ವೀಟ್







