ಪ.ಬಂಗಾಳ ಚುನಾವಣೆ: ಕೇಂದ್ರ ಸಚಿವರು ಸೇರಿದಂತೆ ಮೂವರು ಹಾಲಿ ಸಂಸದರನ್ನು ಕಣಕ್ಕಿಳಿಸಿದ ಬಿಜೆಪಿ
ಈ ಹೆಜ್ಜೆಯನ್ನು ಟೀಕಿಸಿದ ಟಿಎಂಸಿ

ಬಾಬುಲ್ ಸುಪ್ರಿಯೊ
ಹೊಸದಿಲ್ಲಿ: ಮುಂಬರುವ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂವರು ಹಾಲಿ ಸಂಸದರು ಹಾಗೂ ಓರ್ವ ರಾಜ್ಯಸಭಾ ಸದಸ್ಯನನ್ನು ಕಣಕ್ಕಿಳಿಸಿದೆ. ದಿಲ್ಲಿ ಮುಖ್ಯ ಕಚೇರಿಯಲ್ಲಿ ಸಿಇಸಿ ಸಭೆಯ ಮರುದಿನ ಬಿಜೆಪಿ ಅಸ್ಸಾಂ , ಕೇರಳ ಹಾಗೂ ಬಂಗಾಳದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬಂಗಾಳದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಹೆಸರಿದ್ದು, ಇವರು ದಕ್ಷಿಣ ಕೋಲ್ಕತ್ತಾದ ಟೋಲಿಗಂಜ್ ನಿಂದ ಸ್ಪರ್ಧಿಸಲಿದ್ದಾರೆ. ಸುಪ್ರಿಯೊ ಮೂರು ಬಾರಿಯ ಟಿಎಂಸಿ ಶಾಸಕ ಅರೂಪ್ ಬಿಸ್ವಾಸ್ ರನ್ನು ಎದುರಿಸಲಿದ್ದಾರೆ.
ಅದೇ ರೀತಿ ರಾಜ್ಯಸಭಾ ಎಂಪಿ(ನಾಮನಿರ್ದೇಶಿತ)ಸ್ವಪನ್ ದಾಸ್ ಗುಪ್ತಾ ಅವರು ಹೂಗ್ಲಿ ಜಿಲ್ಲೆಯ ತಾರಕೇಶ್ವರದಿಂದ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಲಿದ್ದಾರೆ. ದಾಸ್ ಅವರು ಟಿಎಂಸಿಯ ರಮೇಂದು ಸಿಂಗ್ ರಾಯ್ ಅವರನ್ನು ಎದುರಿಸಲಿದ್ದಾರೆ.
ಹೂಗ್ಲಿಯ ಬಿಜೆಪಿ ಲೋಕಸಭಾ ಸಂಸದೆ ಲಾಕೆಟ್ ಚಟರ್ಜಿ ಅವರು ಹೂಗ್ಲಿ ಜಿಲ್ಲೆಯ ಚುನ್ ಚುರಾದಿಂದ ಸ್ಪರ್ಧಿಸಲಿದ್ದಾರೆ. ಲಾಕೆಟ್ ಚಟರ್ಜಿ ಅವರು ಎರಡು ಬಾರಿಯ ಟಿಎಂಸಿ ಶಾಸಕ ಆಸಿತ್ ಮಝುಂದಾರ್ ರನ್ನು ಎದುರಿಸಲಿದ್ದಾರೆ.
ಕೂಚ್ ಬಿಹಾರದ ಬಿಜೆಪಿಯ ಹಾಲಿ ಸಂಸದ ನಿಸಿತ್ ಪ್ರಾಮಾಣಿಕ್ ಅವರು ಬಂಗಾಳದ ಕೂಚ್ ಬಿಹಾರ ಜಿಲ್ಲೆಯ ದಿನಹಟಾದಿಂದ ಕಣಕ್ಕಿಳಿಯಲಿದ್ದಾರೆ. ಎರಡು ಬಾರಿಯ ಶಾಸಕ ಉದಯನ್ ಗುಹಾರನ್ನು ತೃಣಮೂಲ ಕಾಂಗ್ರೆಸ್ ಕಣಕ್ಕಿಳಿಸಿದೆ.
ಬಂಗಾಳದ ಮೂರನೇ ಹಂತದ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿಯ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ, ಬಿಜೆಪಿಯಲ್ಲಿ ಉತ್ತಮ ಅಭ್ಯರ್ಥಿಗಳ ಕೊರತೆ ಇದೆ ಎಂದು ಟೀಕಿಸಿದೆ.
ಬಿಜೆಪಿಯಲ್ಲಿ ಅಭ್ಯರ್ಥಿಗಳ ಕೊರತೆ ಇದೆ. ಹೀಗಾಗಿ ಹಾಲಿ ಸಂಸದರು ಹಾಗೂ ಟಿಎಂಸಿಯಿಂದ ಪಕ್ಷಾಂತರವಾಗಿರುವವರನ್ನು ಸ್ಪರ್ಧಿಗಿಳಿಸಿದೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಸಾರಥಿ ಹೇಳಿದ್ದಾರೆ.







