ಪುತ್ತೂರು: ರಾಜ್ಯ ಮಟ್ಟದ ಪುಸ್ತಕ ಮೇಳ ಸಮಾರೋಪ
ಅಂತರ್ಜಾಲದ ನಡುವೆಯೂ ಮುದ್ರಿತ ಪುಸ್ತಕಗಳಿಗೆ ಮೌಲ್ಯವಿದೆ: ಡಾ. ಅಜಕ್ಕಳ

ಪುತ್ತೂರು: ಪುಸ್ತಕ ಸಂಸೃತಿಯು ಜ್ಞಾನದ ಅರಿವಿನ ಸಂಸ್ಕೃತಿಯಾಗಿದೆ. ಪುಸ್ತಕ ಓದುವಿಕೆಯ ಪದ್ದತಿಯಲ್ಲಿ ಇ ಪುಸ್ತಕ ಮತ್ತು ಕೇಳು ಪುಸ್ತಕ ವ್ಯವಸ್ಥೆಯು ಇಂದು ಅಂತರ್ಜಾಲದ ಮೂಲಕ ಲಭ್ಯವಾಗಿದ್ದರೂ ಮುದ್ರಿತ ಪುಸ್ತಕಗಳಿಗೆ ಅದರದೇ ಆದ ಮೌಲ್ಯವಿದೆ ಎಂದು ಬೆಂಗಳೂರಿನ ಕುವೆಂಪು ಭಾಷಾ ಭಾರತಿಯ ಅಧ್ಯಕ್ಷ ಡಾ. ಗಿರೀಶ್ ಭಟ್ ಅಜಕ್ಕಳ ಹೇಳಿದರು.
ಅವರು ರವಿವಾರ ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ವತಿಯಿಂದ ಆಯೋಜಿಸಲಾದ ರಾಜ್ಯ ಮಟ್ಟದ ಪುಸ್ತಕ ಮೇಳದ ಸಮಾರೋಪ ಭಾಷಣ ಮಾಡಿದರು.
ಈ ತಲೆಮಾರಿನ ವರೆಗೆ ಪುಸ್ತಕ ರೂಪದಲ್ಲಿಯೇ ಸಾಹಿತ್ಯದ ಓದು ಮುಂದುವರಿದರೂ ಮುಂದಿನ ತಲೆಮಾರಿಗೂ ಪುಸ್ತಕ ಓದು ಮುಂದುವರಿಯಬೇಕು. ಪುಸ್ತಕಗಳು ಜ್ಞಾನಕ್ಕಾಗಿ ಮತ್ತು ಮಾನಸಿಕ ಉಲ್ಲಾಸಕ್ಕಾಗಿ ಅನಿವಾರ್ಯ. ಪುಸ್ತಕ ಓದುವುದು ಬಹುದೊಡ್ಡ ಹೂಡಿಕೆಯಾಗಿದೆ. ಸಮಯವೆಂಬ ಸಂಪತ್ತನ್ನು ಪುಸ್ತಕ ಓದಿಗೆ ಬಳಕೆ ಮಾಡಬೇಕಾಗಿದೆ ಎಂದು ಅಭಿಪ್ರಾಯಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಕನ್ನಡ ಸರ್ವವ್ಯಾಪಿ, ಸರ್ವಸ್ಪರ್ಷಿಯಾಗಿ ಬೆಳೆಯಬೇಕು. ಅನ್ಯ ಭಾಷೆಯ ಪ್ರಭಾವದಿಂದ ಕನ್ನಡ ನಮ್ಮ ಮನೆಯಿಂದ ಮರೆಯಾಗಬಾರದು. ಈ ದಿಸೆಯಲ್ಲಿ ರಾಜ್ಯ ಸರ್ಕಾರವು ಕನ್ನಡ ಗ್ರಂಥಾಲಯಗಳ ಸ್ಥಾನೆಗೆ ಹೆಚ್ಚು ಒತ್ತು ಕೊಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯೆ ಡಾ. ಸುಧಾ ಶ್ರೀಪತಿ ರಾವ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಹರಿನಾರಾಯಣ ಮಾಡಾವು ಪಾಲ್ಗೊಂಡಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ಸ್ವಾಗತಿಸಿ, ಕಾರ್ಯದರ್ಶಿ ಡಾ. ಶ್ರೀಧರ್ ಎಚ್.ಜಿ ವಂದಿಸಿದರು. ಸರೋಜಿನಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು.







