ಕೇರಳ ವಿಧಾನಸಭಾ ಚುನಾವಣೆ: ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ, ಪಾಲಕ್ಕಾಡ್ ನಿಂದ ಶ್ರೀಧರನ್ ಸ್ಪರ್ಧೆ
ಪಕ್ಷದ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಎರಡು ಕ್ಷೇತ್ರದಿಂದ ಕಣಕ್ಕೆ

ಹೊಸದಿಲ್ಲಿ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ರವಿವಾರ 112 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ರನ್ನು ಮಂಜೇಶ್ವರ ಹಾಗೂ ಕೊನ್ನಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಮೆಟ್ರೋಮ್ಯಾನ್ ಖ್ಯಾತಿಯ ಇ.ಶ್ರೀಧರನ್ ಪಾಲಕ್ಕಾಡ್ ನಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ಕೇರಳದಲ್ಲಿ 115 ಸೀಟುಗಳಲ್ಲಿ ಸ್ಪರ್ಧಿಸಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್, ಕೇರಳ ಬಿಜೆಪಿ 115 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಉಳಿದ 25 ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಕಾಸರಗೋಡಿನ ಮಂಜೇಶ್ವರ ಹಾಗೂ ಪಟ್ಟಣಂತಿಟ್ಟದ ಕೊನ್ನಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ರಾಜಶೇಖರನ್ ನೆಮೊಮ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಕೇಂದ್ರ ಸಚಿವ ಕೆಜೆ ಅಲ್ಫಾನ್ಸೊ ಕಾಂಜಿರಪ್ಪಲ್ಲಿಯಿಂದ ಕಣಕ್ಕಿಳಿಯಲಿದ್ದಾರೆ. ಸುರೇಶ್ ಗೋಪಿ ತ್ರಿಶೂರ್ ನಿಂದ, ಡಾ.ಅಬ್ದುಲ್ ಸಲಾಂ ತಿರೂರ್ ನಿಂದ ಸ್ಪರ್ಧೆಗಿಳಿಯಲಿದ್ದಾರೆ.





