ಅಶ್ಲೀಲ ಸಿಡಿ ಪ್ರಕರಣ: ಸಂತ್ರಸ್ತ ಯುವತಿಯ ಮನೆಗೆ ನೋಟಿಸ್ ಅಂಟಿಸಿದ ಪೊಲೀಸರು

ಬೆಂಗಳೂರು, ಮಾ. 14: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತ ಯುವತಿಗೆ ನೀಡಿರುವ ನೋಟಿಸ್ ಅನ್ನು ಸಂತ್ರಸ್ತೆಯ ತಾಯಿಯ ತವರು ವಿಜಯಪುರ ಜಿಲ್ಲೆಯಲ್ಲಿನ ಮನೆಯ ಬಾಗಿಲಿಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಅಂಟಿಸಿದ್ದಾರೆ.
ಮನೆಗೆ ಬೀಗ ಹಾಕಿದ್ದು, ನೋಟಿಸ್ ಅನ್ನು ಬಾಗಿಲಿಗೆ ಅಂಟಿಸಿದ್ದಾರೆ. ಇನ್ನು, ವಿಡಿಯೊ ಬಹಿರಂಗವಾಗುವುದಕ್ಕೂ ಮುನ್ನವೇ ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿ ಬೇರೆಡೆಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ನೋಟಿಸ್‍ನಲ್ಲಿ ಏನಿದೆ?: ಮಾ.2ರಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿ ಸಂಬಂಧ ದೂರು ದಾಖಲಾಗಿದೆ. ಈ ಸಂಬಂಧ ತಮ್ಮ ಹೇಳಿಕೆ ಪಡೆದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ಆದ್ದರಿಂದ ನೋಟಿಸ್ ತಲುಪಿದ ಅಥವಾ ನೋಡಿದ ತಕ್ಷಣ ತುರ್ತಾಗಿ ಠಾಣೆಗೆ ಹಾಜರಾಗುವಂತೆ ಸಂತ್ರಸ್ತೆಗೆ ನೀಡಿರುವ ನೋಟಿಸ್‍ನಲ್ಲಿ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಉಲ್ಲೇಖಿಸಿದ್ದಾರೆ.
ಆಯೋಗ ದೂರು: ಶನಿವಾರ ಸಂತ್ರಸ್ತ ಯುವತಿಯು ರಕ್ಷಣೆ ಕೋರಿ ವಿಡಿಯೊ ಬಿಡುಗಡೆ ಮಾಡುತ್ತಿದ್ದಂತೆ, ರಾಜ್ಯ ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ರವಿವಾರ ಈ ಸಂಬಂಧ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಯುವತಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸೂಚನೆ ನೀಡಿದ್ದಾರೆ.
ಇನ್ನು, ಈ ಕುರಿತು ಪ್ರತಿಕ್ರಿಯಿಸಿರುವ ಪ್ರಮೀಳಾ ನಾಯ್ಡು, ಯುವತಿಯು ಭಯಗೊಂಡಿರುವುದು ಮತ್ತು ಆತಂಕದಲ್ಲಿರುವುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ. ಅವರಿಗೆ ರಕ್ಷಣೆ ಒದಗಿಸುವುದು ಸರಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ನಾವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಗೃಹ ಸಚಿವರು ಮತ್ತು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಈ ಬಗ್ಗೆ ಆಯೋಗದಿಂದ ಪತ್ರ ಬರೆಯಲಾಗುವುದು ಎಂದರು.







