ತಮಿಳುನಾಡು ಚುನಾವಣೆ: ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ನಟಿ ಖುಷ್ಬು ಸುಂದರ್, ಅಣ್ಣಾಮಲೈ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ನಟಿ ಖುಷ್ಬು ಸುಂದರ್, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ನಟಿ-ರಾಜಕಾರಿಣಿ ಖುಷ್ಬು ಚೆನ್ನೈನ ತೌಸಂಡ್ ಲೈಟ್ಸ್ ಕ್ಷೇತ್ರದಲ್ಲಿ ಡಿಎಂಕೆಯ ಡಾ. ಇಝಿಲಾನ್ ವಿರುದ್ದ ಸ್ಪರ್ಧಿಸಲಿದ್ದಾರೆ.
ಈ ಅವಕಾಶವನ್ನು ನೀಡಿದ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಧನ್ಯವಾದ ಸಲ್ಲಿಸುವೆ. ನಾನು ಕಠಿಣ ಪರಿಶ್ರಮದಿಂದ ಈ ಕ್ಷೇತ್ರದಿಂದ ಗೆಲುವು ಸಾಧಿಸುವೆ ಎಂದು ಖುಷ್ಬು ಟ್ವೀಟಿಸಿದ್ದಾರೆ.
ಖುಷ್ಬು ಕಾಂಗ್ರೆಸ್ ಸೇರುವ ಮೊದಲು ಡಿಎಂಕೆ ಪಕ್ಷದಲ್ಲಿದ್ದರು. ಇದೀಗ ಅವರು ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಅರಾವಕುರುಚಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಅವರು ಥರಪುರಂ ಹಾಗೂ ಎಚ್.ರಾಜಾ ಅವರು ಕಾರೈಕುಡಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಅಣ್ಣಾಮಲೈ 2019ರಲ್ಲಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ 2020ರ ಆಗಸ್ಟ್ ನಲ್ಲಿ ಬಿಜೆಪಿಗೆ ಸೇರಿದ್ದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಲ್ಲಿ ಒಬ್ಬರಾಗಿ ನೇಮಕಗೊಂಡಿದ್ದರು. ಬಿಜೆಪಿ ಸೇರಿ 7 ತಿಂಗಳ ಬಳಿಕ ಅರಾವಕುರುಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಇಂದು ಬೆಳಗ್ಗೆ ಡಿಎಂಕೆ ತ್ಯಜಿಸಿರುವ ಡಾ.ಸರವಣನ್ ಅವರನ್ನು ಮಧುರೈ ಉತ್ತರದಿಂದ ಬಿಜೆಪಿ ಸ್ಪರ್ಧೆಗಿಳಿಸಿದೆ.
ಬಿಜೆಪಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಇತರ ಮೈತ್ರಿಪಕ್ಷಗಳೊಂದಿಗೆ ಸೇರಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿ ತಮಿಳುನಾಡಿನಲ್ಲಿ ಒಟ್ಟು 20 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಈರಾಜ್ಯದಲ್ಲಿ ಎ.6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.







