ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ನೀತಾ ಅಂಬಾನಿ?

ವಾರಣಾಸಿ, ಮಾರ್ಚ್ 14: ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು)ದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಬೋಧನೆ ಮಾಡುವ ಪ್ರಸ್ತಾಪವನ್ನು ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ. BHU ನೀತಾ ಅಂಬಾನಿಯನ್ನು ವಿಶ್ವವಿದ್ಯಾಲಯದ ಮಹಿಳಾ ಅಭಿವೃದ್ಧಿ ಮತ್ತು ಅಧ್ಯಯನ ಕೇಂದ್ರದ ಭಾಗವಾಗುವಂತೆ ಕೇಳಿದೆ ಎಂದು ತಿಳಿದು ಬಂದಿದೆ. ಈ ಪ್ರಸ್ತಾಪವನ್ನು ಮಾರ್ಚ್ 12, 2021 ರಂದು ನೀತಾ ಅಂಬಾನಿಗೆ ಕಳುಹಿಸಲಾಗಿದ್ದು, ಅವರು ವಿಶ್ವವಿದ್ಯಾಲಯದಲ್ಲಿ ಬೋಧಿಸಲಿದ್ದಾರೆಯೇ ಎನ್ನುವ ಕುರಿತು ಅಧಿಕೃತ ಮಾಹಿತಿ ಹೊರ ಬಂದಿಲ್ಲ.
ʼದೈನಿಕ್ ಜಾಗರಣ್ʼ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿಶ್ವವಿದ್ಯಾಲಯವು ನೀತಾ ಅಂಬಾನಿಯಿಂದ ಮೌಖಿಕ ದೃಢೀಕರಣವನ್ನು ಪಡೆದಿದೆ. ಪ್ರಸ್ತಾವನೆಯಲ್ಲಿ, ಉತ್ತರ ಪ್ರದೇಶದ ಪೂರ್ವಾಂಚಲ್ ಪ್ರದೇಶದ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವ ಸಲುವಾಗಿ ನಡೆಸಲಿರುವ ಅಧ್ಯಯನ ತರಗತಿಗಳಲ್ಲಿ ಬೋಧನೆ ಮಾಡುವಂತೆ ವಿಶ್ವವಿದ್ಯಾಲಯವು ನೀತಾ ಅಂಬಾನಿಯನ್ನು ಕೇಳಿಕೊಂಡಿದೆ ಎನ್ನಲಾಗಿದೆ. ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ, 2021 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭ ಮಹಿಳಾ ಸಬಲೀಕರಣಕ್ಕಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್ ‘ಹರ್ ಸರ್ಕಲ್’ ಅನ್ನು ಪ್ರಾರಂಭಿಸಿದ್ದಾರೆ.
ಪೂರ್ವಾಂಚಲ್ ಪ್ರದೇಶದ ಮಹಿಳೆಯರನ್ನು ಸಬಲೀಕರಣಗೊಳಿಸಲು ಬಿಎಚ್‌ಯು ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. ರಿಲಯನ್ಸ್ ಫೌಂಡೇಶನ್‌ನೊಂದಿಗೆ ಸಹಭಾಗಿತ್ವ ವಹಿಸುವ ಮೂಲಕ ವಿಶ್ವವಿದ್ಯಾಲಯವು ಈ ವಿಷಯವನ್ನು ಅಂತರರಾಷ್ಟ್ರೀಯ ವೇದಿಕೆಗೆ ಕೊಂಡೊಯ್ಯಲಿದೆ ಎನ್ನಲಾಗಿದೆ. ನೀತಾ ಅಂಬಾನಿಯ ಅನುಭವದಿಂದ ಮತ್ತು ಬೋಧನೆಯಿಂದ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.







