ಬಿಜೆಪಿ ತೊರೆದ ಕೋಲ್ಕತಾದ ಮಾಜಿ ಮೇಯರ್ ಸೋವನ್ ಚಟರ್ಜಿ
ವಿಧಾನಸಭಾ ಚುನಾವಣಾ ಟಿಕೆಟ್ ನಿರಾಕರಣೆ

ಕೋಲ್ಕತಾ: ಕೋಲ್ಕತಾದ ಮಾಜಿ ಮೇಯರ್ ಸೋವನ್ ಚಟರ್ಜಿ ತನ್ನ ಸಾಂಪ್ರದಾಯಿಕ ವಿಧಾನಸಭಾ ಕ್ಷೇತ್ರ ಬೆಹಾಲಾ ಪೂರ್ವ ದಿಂದ ಚುನಾವಣಾ ಟಿಕೆಟ್ ನಿರಾಕರಿಸಿದ್ದಕ್ಕೆ ಬಿಜೆಪಿಯನ್ನು ತೊರೆದಿದ್ದಾರೆ. ಚಟರ್ಜಿ 2019ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರಿದ್ದರು.
ಬೆಹಾಲ ಪೂರ್ವ(ಈಸ್ಟ್)ಕ್ಷೇತ್ರದಿಂದ ನಟಿ ಪಾಯಲ್ ಸರ್ಕಾರ್ ರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಸರ್ಕಾರ್ ಫೆಬ್ರವರಿ 25ರಂದು ಬಿಜೆಪಿಗೆ ಸೇರಿದ್ದರು.
ಬಿಜೆಪಿ ನಾಯಕ ಬೈಶಾಖಿ ಬ್ಯಾನರ್ಜಿ ಅವರು ರವಿವಾರ ಸೋವನ್ ಚಟರ್ಜಿ ಪಕ್ಷವನ್ನು ತ್ಯಜಿಸಿರುವ ವಿಚಾರ ತಿಳಿಸಿದರು. ತಾನು ಕೂಡ ಬಿಜೆಪಿಯಿಂದ ಬೇರ್ಪಡುವುದಾಗಿ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.
ಇಂದಿನ ಅವಮಾನ ನಮ್ಮ ಸ್ಫೂರ್ತಿಯನ್ನು ಕುಗ್ಗಿಸದು ಎಂದು ಸೋವನ್ ಚಟರ್ಜಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದನ್ನು ಉಲ್ಲೇಖಿಸಿ ಬ್ಯಾನರ್ಜಿ ಪೋಸ್ಟ್ ಮಾಡಿದ್ದಾರೆ.
ಬೈಶಾಖಿ ಬ್ಯಾನರ್ಜಿ ಹಾಗೂ ಸೋವನ್ ಚಟರ್ಜಿ ದಿಲ್ಲಿಯಲ್ಲಿರುವ ಬಿಜೆಪಿ ರಾಷ್ಟ್ರ ನಾಯಕತ್ವಕ್ಕೆ ರಾಜೀನಾಮೆ ಕಳುಹಿಸಿಕೊಟ್ಟಿದ್ದಾರೆ.
ಸೋವನ್ ಚಟರ್ಜಿ 2011ರಲ್ಲಿ ಟಿಎಂಸಿ ಟಿಕೆಟ್ ನಲ್ಲಿ ಬೆಹಾಲಾ ಪೂರ್ವ ಕ್ಷೇತ್ರವನ್ನು ಗೆದ್ದುಕೊಂಡಿದ್ದರು. 2016ರಲ್ಲಿ ಈ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. 2016ರಲ್ಲಿ ಬಂಗಾಳ ಸಂಪುಟದಲ್ಲಿ ಸಚಿವರಾಗಿದ್ದ ಸೋವನ್ 2018ರಲ್ಲಿ ಮೇಯರ್ ಹುದ್ದೆಯನ್ನು ತ್ಯಜಿಸಿದ್ದರು. 2019ರ ಆಗಸ್ಟ್ ನಲ್ಲಿ ಬಿಜೆಪಿಗೆ ಸೇರಿದ್ದರು.







