‘ವಸುದೈವ ಕುಟುಂಬಕಂ’ ಭಾರತದ ಮೂಲಮಂತ್ರಂ: ಪ್ರೊ.ಎಂ.ಡಿ.ನಲಪತ್

ಮಣಿಪಾಲ, ಮಾ.14: ಭಾರತೀಯ ಧಾರ್ಮಿಕ ಮತ್ತು ತಾತ್ವಿಕ ವ್ಯವಸ್ಥೆಗಳ ಪ್ರಧಾನ ಅಂಶವೆಂದರೆ, ಇತರ ನಂಬಿಕೆಯವರು ಹಾಗೂ ರಾಷ್ಟ್ರಗಳೊಂದಿಗೆ ಶಾಂತಿಯುತ ಸಹಬಾಳ್ವೆ ನಡೆಸುವುದಾಗಿದೆ. ಇದನ್ನೇ ನಮ್ಮ ‘ವಸುದೈವ ಕುಟುಂಬಕಂ’ (ಜಗತ್ತು ಒಂದು ಕುಟುಂಬ) ಎಂಬ ಮಾತು ಪ್ರತಿಧ್ವನಿಸುತ್ತದೆ ಎಂದು ನಾಡಿನ ಪ್ರಮುಖ ಭೂ-ರಾಜಕೀಯ ವಿಶ್ಲೇಷಕ ಹಾಗೂ ಹಿರಿಯ ಪತ್ರಕರ್ತ ಪ್ರೊ.ಎಂ.ಡಿ.ನಲಪತ್ ಹೇಳಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಎಂಡ್ ಸಾಯನ್ಸ್ (ಜಿಸಿಪಿಎಎಸ್) ಶನಿವಾರ ‘ಜಾಗತಿಕ ರಾಜಕೀಯ ಮತ್ತು ಅಹಿಂಸೆ’ ಎಂಬ ವಿಷಯದ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತಿದ್ದರು.
ವಸುದೈವ ಕುಟುಂಬಂ ಎಂಬ ಪದದ ಸಾರವೇ ಭಾರತೀಯ ಚಿಂತನ ವಿಧಾನವನ್ನು ವ್ಯಾಖ್ಯಾನಿಸುತ್ತದೆ. ಇಲ್ಲಿ ಸನಾತನ ಧರ್ಮ, ಬೌದ್ಧ ಧರ್ಮ, ಜೈನ, ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳೆಲ್ಲವೂ ಒಂದು ಇನ್ನೊಂದಕ್ಕೆ ಯಾವುದೇ ತೊಂದರೆಯನ್ನು ನೀಡದೇ ಸಹಬಾಳ್ವೆ ನಡೆಸುತ್ತಾ ಬಂದಿವೆ. ಈ ಎಲ್ಲಾ ಧರ್ಮಗಳ ಒಟ್ಟು ಸಾರಾಂಶವೇ (ಡಿಎನ್‌ಎ) ಇದಾಗಿದೆ ಎಂದವರು ನುಡಿದರು.
ನಿಜವಾದ ಭೌಗೋಳಿಕ ರಾಜಕೀಯ (ಜಿಯೋಪಾಲಿಟಿಕ್ಸ್)ದಲ್ಲಿ ವಾಸ್ತವ ವಾದ ಪ್ರಧಾನಅಂಶವಾದರೂ, ಇದರಲ್ಲಿ ಯುದ್ಧವು ಕೊನೆಯ ಆಯ್ಕೆಯಾ ಗಿರುತ್ತದೆ. ಹೀಗಾಗಿ ಶಾಂತಿ ಮತ್ತು ಅಹಿಂಸೆಯ ಸಂದೇಶಗಳನ್ನು ಯಾವಾಗಲೂ ಎತ್ತಿಹಿಡಿಯುವ ಅಗತ್ಯವಿದೆ. ತಾನು ಭಾಗವಾಗಿರುವ ಯುನೆಸ್ಕೋ ಶಾಂತಿ ಪೀಠ ಈ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಮುಂದುವರಿಸುತ್ತದೆ ಎಂದವರು ಹೇಳಿದರು.
ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಕುರಿತು ಮಾತನಾಡಿದ ಎಂ.ಡಿ.ನಲಪತ್, ಪಾಕಿಸ್ತಾನದ ವಿಷಯದಲ್ಲಿ ನಾವು ಪಾಕಿಸ್ತಾನದ ಸಾಮಾನ್ಯ ಜನತೆ ಹಾಗೂ ಪಾಕಿಸ್ತಾನದ ಸೈನ್ಯದ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸಬೇಕಾಗಿದೆ ಎಂದರು. ಪಾಕಿಸ್ತಾನದ ಜನಸಾಮಾನ್ಯರು ಭಾರತದೊಂದಿಗೆ ಶಾಂತಿಯನ್ನು ಬಯಸುವವರಾದರೆ, ಅಲ್ಲಿನ ಸೈನ್ಯಕ್ಕೆ ಅದರದ್ದೇ ಆದ ಆಲೋಚನೆಗಳಿವೆ. ಪಾಕಿಸ್ತಾನದ ಕುರಿತಂತೆ ತಾನು ಬರೆದ ಈ ಅಭಿಪ್ರಾಯಗಳು ಪಾಕಿಸ್ತಾನಿ ಜನರಿಂದಲೂ ಮೆಚ್ಚುಗೆ ಗಳಿಸಿವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಸಿಪಿಎಎಸ್ ನಿರ್ದೇಶಕ ಪ್ರೊ.ವರದೇಶ್ ಹಿರೆಗಂಗೆ, ಜಾಗತಿಕ ರಾಜಕೀಯದ ವಾಸ್ತವತೆಗಳ ಅರಿವಿದ್ದಾಗಿಯೂ, ‘ಅಹಿಂಸೆ’ ಸಾಕಾರಗೊಳ್ಳಲೇಬೇಕಾದ ಗುರಿ ಮತ್ತು ದಾರಿ ಎಂದರು.
ಜಿಸಿಪಿಎಎಸ್ ಇದೇ ಶೈಕ್ಷಣಿಕ ವರ್ಷದಿಂದ ’ಏಸ್ತೆಟಿಕ್ಸ್ ಮತ್ತು ಪೀಸ್ ಸ್ಟಡೀಸ್’ನಲ್ಲಿ ಬಿ.ಎ. ಪದವಿ ಕಾರ್ಯಕ್ರಮವನ್ನು ಆರಂಭಿಸಲಿದೆ ಎಂದೂ ಪ್ರೊ. ಹಿರೇಗಂಗೆ ತಿಳಿಸಿದರು. ವಿದ್ಯಾರ್ಥಿಗಳಾದ ಜೂಡಿ ಫೇಬರ್ ಸ್ವಾಗತಿಸಿ, ಟ್ರೈಫೆನ್ ಫೋನ್ಸೆಕಾ ವಂದಿಸಿದರು








