ತುಳುಭಾಷೆಗೆ ಸಿಗಬೇಕಾಗಿದ್ದ ಮಾನ್ಯತೆ ಸಿಕ್ಕಿಲ್ಲ: ದಯಾನಂದ ಕತ್ತಲ್‌ಸಾರ್

ಉಡುಪಿ, ಮಾ.14: ಅಷ್ಟ ಮಠಾಧೀಶರು ಸಹಿ ಮಾಡುವ, ಮಲಯಾಳಂ ಭಾಷೆಗೆ ಲಿಪಿ ನೀಡಿದ, ಸಂಸ್ಕೃತದ ಓಂಕಾರ ಬರೆಯುವ ಲಿಪಿ ತುಳು ಭಾಷೆಯಾಗಿದ್ದರೂ ಅದಕ್ಕೆ ಸಿಗಬೇಕಾಗಿದ್ದ ಮಾನ್ಯತೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತುಳುವರು ಜವಾಬ್ದಾರಿ ಅರಿತುಕೊಂಡು ತುಳುಭಾಷೆ, ಸಂಸ್ಕೃತಿಯನ್ನು ಉಳಿಸಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಾನಂದ ಜಿ.ಕತ್ತಲ್‌ಸಾರ್ ಹೇಳಿದ್ದಾರೆ.
ಉಡುಪಿ ತುಳುಕೂಟದ ವತಿಯಿಂದ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ದಿವಂಗತ ದೊಡ್ಡಣ್ಣ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ತುಳು ಲಿಪಿಗೆ ಪ್ರಾಶಸ್ತ್ಯ ನೀಡುವ ಮೂಲಕ ಜನಪ್ರಿಯಗೊಳಿಸಬೇಕಾದ ಅಗತ್ಯ ಇದೆ. ಹೊರರಾಜ್ಯದಲ್ಲಿರುವ ತುಳುನಾಡಿನವರು ಮನೆಯಲ್ಲಿ ತುಳು ಮಾತನಾಡುವುದರಿಂದ ಮುಂದಿನ ಜನಾಂಗ ತುಳು ಕಲಿಯಲು ಸಾಧ್ಯವಾಗುತ್ತದೆ. ತುಳು ಭಾಷೆ ಮತ್ತು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರು ಜವಾಬ್ದಾರಿಯಿಂದ ಕೆಲಸ ಮಾಡ ಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿ ತ್ತಾಯ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ಅವರ ಪ್ರಥಮ ತುಳು ಲಿಪಿಯ ನಾಟಕ ‘ಪಿಂಗಾರದ ಬಾಲೆ ಸಿರಿ’ ಕೃತಿಯನ್ನು ದಯಾನಂದ ಜಿ.ಕತ್ತಲಸಾರ್ ಅನಾವರಣಗೊಳಿಸಿದರು.
ತುಳು ಮಿನದನ ಸ್ಪರ್ಧೆ, ದಿವಂಗತ ನಿಟ್ಟೂರು ಸಂಜೀವ ಭಂಡಾರಿ ನೆನಪಿನ ಭಾವಗೀತೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತುಳು ಲಿಪಿ ಅಭಿಯಾನ ನಡೆಸಿದ ಜೈ ತುಳುನಾಡ್ ಸಂಸ್ಥೆಗೆ ಮತ್ತು ಉಡುಪಿ ಜಿಲ್ಲೆಯಲ್ಲಿ ತೃತೀಯ ಐಚ್ಛಿಕ ಭಾಷಾ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಆಕಾಶ್‌ರಾಜ್ ಜೈನ್, ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಮುಖ್ಯಸ್ಥರ ಡಾ. ಮಾಧವ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇ ವಿದಾಸ ನಾಯ್ಕ್ ಭಾಗವಹಿಸಿದ್ದರು.
ಕೆಮ್ತೂರು ಕುಟುಂಬದ ಪರವಾಗಿ ವಿಜಯಕುಮಾರ್ ಶೆಟ್ಟಿ, ತುಳುಕೂಟದ ಸ್ಥಾಪಕಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ನಿಕಟಪೂರ್ವಾಧ್ಯಕ್ಷ ವಿ.ಜಿ.ಶೆಟ್ಟಿ, ಉಪಾಧ್ಯಕ್ಷೆ ವೇದಾವತಿ, ನಾಟಕ ಸ್ಪರ್ಧೆಯ ಸಂಚಾಲಕ ಬಿ.ಪ್ರಭಾಕರ್ ಭಂಡಾರಿ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೋಶಾಧಿಕಾರಿ ಚೈತನ್ಯ ಎಂ.ಜಿ. ವಂದಿಸಿದರು. ತುಳುಕೂಟದ ಕಾದಂಬರಿ ಸ್ಪರ್ಧೆಯ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಒರಿಯ ರ್ದೊರಿ ಅಸಲ್ ನಾಟಕ ಪ್ರದರ್ಶನಗೊಂಡಿತು.







