ಮೈಮುಲ್ ಚುನಾವಣೆಯಲ್ಲಿ ಅಲ್ಲ, ಯಾವ ಚುನಾವಣೆಯಲ್ಲೂ ಜೆಡಿಎಸ್ ಜೊತೆ ಮೈತ್ರಿ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು,ಮಾ.14: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ ಅಲ್ಲ, ಮುಂಬರುವ ಯಾವುದೇ ಚುನಾವಣೆಯಲ್ಲೂ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ರವಿವಾರ ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮೈಮುಲ್ ಚುನಾವಣೆಯಲ್ಲಿ ಅಲ್ಲ ಯಾವ ಚುನಾವಣೆಯಲ್ಲೂ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಕುಮಾರಸ್ವಾಮಿ ಹೇಳಿದರು ಅಷ್ಟೇ ಯಾರು ಹೇಳಿದರು ಅಷ್ಟೇ ಎಂದು ಗರಂ ಆದರು.
ಮೈಮುಲ್ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುವುದಲ್ಲ, ಸ್ಥಳೀಯವಾಗಿ ನಡೆಯುತ್ತದೆ. ಅದಕ್ಕೆ ಬೇಕಾದಂತಹ ತಯಾರಿಯನ್ನು ಅವರವರೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಯಾರ ಜೊತೆಯೂ ಹೊಂದಾಣಿಕೆ ಮಾಡಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿ.ಕೆ.ಶಿವಕುಮಾರ್ ಯಾಕೆ ಹಾಗೆ ಹೇಳಿದ್ದಾರೆ ಎಂಬ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರೇ ಹೇಳಿದ್ದಾರೆ. ಇಂತಹ ಪ್ರಕರಣಗಳಿಂದ ರಾಜಕಾರಣಿಗಳ ಮಾನಮರ್ಯಾದೆ ಹೋಗುತ್ತದೆ. ಜನರು ನಮ್ಮ ಬಗ್ಗೆ ಲಘುವಾಗಿ ಮತ್ತು ಹಗುರವಾಗಿ ಮಾತನಾಡುತ್ತಾರೆ. ಈ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲು ಮಾಡಬೇಕು ಎಂದು ಆಗ್ರಹಿಸಿದರು.
ಭೂ ಸುಧಾರಣೆ ತಿದ್ದುಪಡಿ ಕಾಯಿದೆ ಅನ್ವಯ ಬಡವರಿಗೆ ಸರ್ಕಾರವೇ ನೀಡಿದ್ದ ಜಮೀನನ್ನು ವಾಪಸ್ಸು ಪಡೆಯುತ್ತಿರುವುದರ ಬಗ್ಗೆ ನಾವೇನು ಮೌನ ವಹಿಸಿಲ್ಲ. ಈ ಬಗ್ಗೆ ರಾಜ್ಯಾದ್ಯಂತ ಮಾಹಿತಿ ಕಲೆ ಹಾಕುತ್ತಿದ್ದು, ಗಂಭೀರವಾಗಿ ಪರಿಗಣಿಸಿ ವಿಧಾನಸಭೆ ಕಲಾಪದಲ್ಲಿ ಮತ್ತು ಸಾರ್ವಜನಿಕವಾಗಿ ಧ್ವನಿ ಎತ್ತುತ್ತೇವೆ. ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದ ವಿರುದ್ಧ ಇರುವುದರಿಂದಲೇ ಇಂತಹ ಕ್ರಮಕ್ಕೆ ಮುಂದಾಗಿದೆ. ಸಂಪನ್ಮೂಲ ಕ್ರೋಢೀಕರಿಸುತ್ತೇವೆ ಎಂಬ ನೆಪದಲ್ಲಿ ಸರ್ಕಾರಿ ಜಮೀನು ಮಾರಾಟ ಮಾಡಲು ಮುಂದಾಗಿದ್ದಾರೆ. ಎಷ್ಟು ಜಮೀನುಗಳ ಮೇಲೆ ದಾವೆಗಳಿವೆ. ಇಂತಹ ಕ್ರಮಕ್ಕೆ ಮುಂದಾಗದಂತೆ ಸರ್ಕಾರಕ್ಕೆ ತಿಳಿ ಹೇಳುತ್ತೇನೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಜನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಅರಿಯಲು ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಲಾಗಿದೆ. ಮೈತ್ರಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಸಚಿವರಾಗಿದ್ದ ಸಿ.ಪುಟ್ಟರಂಗ ಶೆಟ್ಟಿ ಮತ್ತು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ನ್ಯಾ. ಕಾಂತರಾಜ್ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧರಾಗಿದ್ದರು. ಆದರೂ ಹಿಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಜಾತಿ ಗಣತಿಯ ಮಾಹಿತಿಯನ್ನು ಬಹಿರಂಗಗೊಳಿಸಬೇಕಾಗುತ್ತದೆ ಎಂಬ ಉದ್ದೇಶದಿಂದಲೇ ವರದಿ ಬಿಡುಗಡೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ರೈತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ರಾಜ್ಯದಲ್ಲಿ ಸಮಾವೇಶ ನಡೆಸಲು ಉದ್ದೇಶಿಸಿರುವ ರೈತ ನಾಯಕ ರಾಕೇಶ್ ಟಿಕಾಯತ್ ಅವರಿಗೆ ಕೋವಿಡ್-19 ನೆಪ ಹೇಳಿ ಸ್ಥಳಾವಕಾಶ ನೀಡದಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಹಾಗೂ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ನಿರಾಕರಿಸಿದರು.







