ಆರ್ಥಿಕ ಮುಗ್ಗಟ್ಟು: ಫೇಸ್‌ಬುಕ್ ಲೈವ್ ಮೂಲಕ ಆತ್ಮಹತ್ಯೆಗೆ ಯತ್ನಿಸಿದ ಗಾಯಕ

ನಾಗಪುರ, ಮಾ. 14: ಆಘಾತಕಾರಿ ಘಟನೆಯೊಂದರಲ್ಲಿ ನಾಗಪುರ ಮೂಲದ ಗಾಯಕನೋರ್ವ ಶನಿವಾರ ತನ್ನ ಮಣಿಕಟ್ಟಿನ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಹಾಗೂ ಈ ಕೃತ್ಯದ ವೀಡಿಯೊವನ್ನು ಫೇಸ್‌ಬುಕ್ ಪೇಜ್‌ನಲ್ಲಿ ನೇರ ಪ್ರಸಾರ ಮಾಡಿದ್ದಾರೆ.
ಕೊರೋನಾ ಸಾಂಕ್ರಾಮಿಕ ರೋಗ ಹರಡಲು ಆರಂಭಿಸಿದ ಬಳಿಕ ಹಣಕಾಸಿನ ಮುಗ್ಗಟ್ಟಿನಿಂದ 35 ವರ್ಷದ ಈ ಗಾಯಕ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಕ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊ ಪೋಸ್ಟ್ ನೋಡಿದ ಗೆಳೆಯರು ಹಾಗೂ ಕುಟುಂಬಿಕರು ಅವರನ್ನು ರಕ್ಷಿಸಿದ್ದಾರೆ ಹಾಗೂ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘‘35 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದರೆ ಅವರ ಪತ್ನಿ ಹಾಗೂ ಮಕ್ಕಳು ನೆರವಿಗಾಗಿ ಅಳುತ್ತಿದ್ದರು. ಹಾಡುಗಾರನ ನಾಗಪುರದ ಪರ್ಡಿ ಪ್ರದೇಶದಲ್ಲಿರುವ ಮನೆಯಲ್ಲಿ ನಡೆದ ಈ ಘಟನೆಯ ನೇರ ಪ್ರಸಾರವನ್ನು ಆತನ ಹಲವು ಗೆಳೆಯರು ನೋಡಿದ್ದಾರೆ. ಕೂಡಲೇ ಅಗಮಿಸಿದ ಅವರು ಹಾಡುಗಾರರನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ಕಲಾವಿದರಿಗೆ ನೆರವು ನೀಡುವಂತೆ ಆಗ್ರಹಿಸಿ ಇಲ್ಲಿ ಅಧಿಕಾರಿಗಳನ್ನು ಭೇಟಿಯಾದ ಕಲಾವಿದರ ಗುಂಪಿನಲ್ಲಿ ಅವರು ಕೂಡ ಇದ್ದರು ಎಂದು ಅವರ ಸಹೋದ್ಯೋಗಿಯೊಬ್ಬರು ಹೇಳಿದ್ದಾರೆ.







