ಹೆಚ್ಚಿನ ಬದಲಾವಣೆಯಿಲ್ಲದೆ ಬಾವಲಿಯಿಂದ ಮಾನವ ದೇಹಕ್ಕೆ ಹರಡಿದ ಕೊರೋನ ವೈರಸ್: ಸಂಶೋಧನೆ

ಲಂಡನ್, ಮಾ. 14: ನೋವೆಲ್ ಕೊರೋನ ವೈರಸ್‌ನ ಹಿಂದಿನ ತಲೆಮಾರು ಬಾವಲಿಗಳಿಂದ ಮಾನವರಿಗೆ ಹೊಂದಿಕೊಳ್ಳಲು ಹೆಚ್ಚಿನ ಬದಲಾವಣೆಗೇನೂ ಒಳಪಡಬೇಕಾಗಿರಲಿಲ್ಲ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಮರ್ಥ್ಯವನ್ನು ಕೊರೋನ ವೈರಸ್ ಮಾನವ ದೇಹಕ್ಕೆ ಹಾರುವ ಮೊದಲು ಬಾವಲಿಯ ದೇಹದಲ್ಲಿ ವಾಸ ಮಾಡುತ್ತಿದ್ದಾಗಲೇ ಗಳಿಸಿತ್ತು ಎಂದು ಅದು ಅಭಿಪ್ರಾಯಪಟ್ಟಿದೆ.
‘ಪಿಎಲ್‌ಒಎಸ್ ಬಯಾಲಜಿ’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಅಧ್ಯಯನವು, ಕೋವಿಡ್-19 ಕಾಯಿಲೆಗೆ ಕಾರಣವಾಗುವ ಸಾರ್ಸ್-ಕೋವ್-2 ವೈರಸ್‌ನ ಲಕ್ಷಾಂತರ ವಂಶವಾಹಿ ಸರಪಳಿಗಳನ್ನು ಅಧ್ಯಯನ ಮಾಡಿದೆ ಹಾಗೂ ಕೋವಿಡ್-19 ಸಾಂಕ್ರಾಮಿಕದ ಮೊದಲ 11 ತಿಂಗಳುಗಳ ಅವಧಿಯಲ್ಲಿ ಕೊರೋನ ವೈರಸ್‌ನಲ್ಲಿ ಯಾವುದೇ ಗಮನಾರ್ಹ ವಂಶವಾಹಿ ಬದಲಾವಣೆಯೇನೂ ಆಗಿಲ್ಲ ಎನ್ನುವುದನ್ನು ಕಂಡುಕೊಂಡಿದೆ.
ಆದರೆ, ಡಿ614ಜಿಯಂತಹ ಕೆಲವು ಬದಲಾವಣೆಗಳು ಹಾಗೂ ವೈರಸ್‌ನ ಪ್ರೊಟೀನ್‌ನಲ್ಲಿ ಕೆಲವು ಮಾರ್ಪಾಡುಗಳು ಸಂಭವಿಸಿವೆ. ಈ ಬದಲಾವಣೆಗಳು ವೈರಸ್‌ನ ಜೈವಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿವೆ ಎಂದು ಸಂಶೋಧನೆ ಹೇಳಿದೆ.





