ಸಿಡಿ ಪ್ರಕರಣದಲ್ಲಿ ಡಿಕೆಶಿ ತನ್ನ ಹೆಸರನ್ನು ಏಕೆ ಮುಂದೆ ಬಿಟ್ಟುಕೊಂಡರೊ ಗೊತ್ತಿಲ್ಲ: ಕುಮಾರಸ್ವಾಮಿ

ಮೈಸೂರು,ಮಾ.14: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಹೆಸರನ್ನು ಯಾರು ಹೇಳಿದ್ದಾರೆ. ಅವರ ಹೆಸರನ್ನು ಏಕೆ ಮುಂದೆ ಬಿಟ್ಟುಕೊಂಡರೊ ಗೊತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಯಾರು ಹೇಳಿದ್ದಾರೆ? ಅವರ ಹೆಸರನ್ನು ಅವರೇ ಏಕೆ ಮುಂದೆ ಬಿಟ್ಟುಕೊಂಡಿದ್ದಾರೆ. ಅವರೆ ಮಾಡಿದ್ದಾರೆ ಅಂತ ಯಾರಾದರು ಹೇಳಿದ್ದಾರ? ರಾಜ್ಯದಲ್ಲಿ ಎಷ್ಟು ಜನ ಮಹಾನ್ ನಾಯಕರುಗಳು ಇದ್ದಾರೆ ಎಂದು ಪ್ರಶ್ನಿಸಿದರು.
ಡಿ.ಕೆ.ಶಿವಕುಮಾರ್ ಬಹಳ ಪ್ರಬುದ್ಧ ರಾಜಕಾರಣಿ, ಅವರು ಯಾಕೆ ಅವರ ಹೆಸರನ್ನು ಮುಂದೆ ಬಿಟ್ಟುಕೊಂಡಿದ್ದಾರೆ. ಮಹಾನ್ ನಾಯಕರುಗಳು ಬಹಳಷ್ಟು ಮಂದಿ ಇದ್ದಾರೆ. ಬಿಜೆಪಿಯಲ್ಲೆ ಮಹಾನ್ ನಾಯಕರು ಬೆಳೆಯುತ್ತಿದ್ದಾರೆ. ಯಾವ ಮಹಾನ್ ನಾಯಕ ಅಂತ ಹೇಳಿದ್ದಾರೆ ಗೊತ್ತಿಲ್ಲ. ಇವರು ತಾವೆ ಅಂತ ಯಾಕೆ ಅಂದುಕೊಂಡರು ಗೊತ್ತಿಲ್ಲ ಎಂದು ಹೇಳಿದರು.
ಡಿಕೆಶಿ ಅವರಿಗೆ ಇರುವ ಅನುಭವ ನಮಗೂ ಇಲ್ಲ. ನಿನ್ನೆ ದುಡುಕಿ ಅವರ ಹೆಸರನ್ನ ಅವರೇ ಹೇಳಿದ್ದಾರೆ. ಯಾಕೆ ಈ ಪ್ರಕರಣಕ್ಕೆ ಅವರ ಹೆಸರು ಸಿಲುಕಿಸಿಕೊಳ್ಳಲು ಹೊರಟಿದೆ ಗೊತ್ತಿಲ್ಲ. ಈ ಪ್ರಕರಣವನ್ನ ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಯಾರಿಗೂ ಗಂಭೀರತೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ. ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಕೆ ಮಾಡಬೇಕು. ಸಂತ್ರಸ್ತ ಮಹಿಳೆಗೆ ಯಾರಿಂದ ರಕ್ಷಣೆ ಸಿಗಬೇಕಿತ್ತೋ ಅದು ಸಿಕ್ಕಿದೆ. ಆ ಹೆಣ್ಣು ಮಗಳಿಗೆ ಎಲ್ಲಾ ರೀತಿಯ ರಕ್ಷಣೆ ಸಿಕ್ಕಿದೆ ಎಂದು ಹೇಳಿದರು.
ಸರ್ಕಾರದಿಂದ ಅವಳನ್ನು ಹುಡುಕಲು ಆಗದಿದ್ದರೂ, ಹಿಂದೆ ಇರುವವರು ಎಲ್ಲಾ ಬಗೆಯ ರಕ್ಷಣೆ ಕೊಟ್ಟಿದ್ದಾರೆ. ನಿನ್ನೆ ಆಕೆ ಸರ್ಕಾರಕ್ಕೆ ವೀಡಿಯೋ ರೆಕಾರ್ಡ್ ಕಳುಹಿಸಿದ್ದಾಳೆ. ಬೇರೆ ಯಾರಾದರು ರೆಕಾರ್ಡ್ ಮಾಡಿ ಕಳುಹಿಸಿದ್ದಾರೊ ತನಿಖೆಯಿಂದ ಹೊರಬರಬೇಕು. ರಕ್ಷಣೆಯನ್ನು ಸರ್ಕಾರ ಕೊಟ್ಟಿದೆಯೋ, ವಿರುದ್ಧ ಇರೋರು ಕೊಟ್ಟಿದ್ದಾರೊ ಗೊತ್ತಿಲ್ಲ. ಸರ್ಕಾರ ರಚನೆಗೆ ಈತನ ಸಹಾಯ ಪಡೆದವರೂ ಈತನ ಸ್ಪೀಡ್ ಕಟ್ ಮಾಡೋಕೆ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.







