ಆಂಧ್ರ ನಗರಾಡಳಿತ ಚುನಾವಣೆ: ವೈಎಸ್‌ಆರ್‌ಸಿ ಜಯಭೇರಿ

ಅಮರಾವತಿ,ಮಾ.14: ಆಂಧ್ರಪ್ರದೇಶದ ನಗರಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಪ್ರಚಂಡ ಜಯಭೇರಿ ಬಾರಿಸಿದ್ದು, 75 ನಗರಸಭೆಗಳ ಪೈಕಿ 74ರಲ್ಲಿ ಗೆಲುವು ಸಾಧಿಸಿದೆ ಹಾಗೂ ಮತಏಣಿಕೆ ನಡೆದಿರುವ ಎಲ್ಲಾ 11 ನಗರಪಾಲಿಕೆಗಳಲ್ಲಿಯೂ ವಿಜಯದೆಡೆಗೆ ಮುನ್ನಡೆದಿದೆ.
ಈಗಾಗಲೇ ಆನಂತಪುರ, ಕಡಪ,ಕುರ್ನೂಲ್, ಚಿತ್ತೂರ್, ತಿರುಪತಿ, ಓಂಗೋಲ್ ಹಾಗೂ ಗುಂಟೂರು ನಗರಗಪಾಲಿಕೆಗಳ ಬಹುತೇಕ ಸ್ಥಾನಗಳಲ್ಲಿ ವೈಎಸ್‌ಆರ್‌ಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ ವಿಜಯ ವಾಡ, ವಿಶಾಖಪಟ್ಟಣಂ ಮಹಾನಗರಪಾಲಿಕೆಗಳಲ್ಲಿ ಮತಏಣಿಕೆ ಮುಂದುವರಿದಿದ್ದು, ವೈಎಸ್‌ಆರ್‌ಪಿ ಉತ್ತಮ ಮುನ್ನಡೆ ಸಾಧಿಸಿದೆ.
ಆಂಧ್ರದ ಎಲ್ಲಾ 12 ಮಹಾನಗರಪಾಲಿಕೆಗಳಿಗೆ ಚುನಾವಣೆ ನಡೆದಿದ್ದು, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಎಲೂರು ನಗರಪಾಲಿಕೆಯ ಮತಏಣಿಕೆ ತಡೆಹಿಡಿಯಲಾಗಿದೆ.
ಮೆದಕುನ್ನೂರು ನಗರಸಭೆಯಲ್ಲಿ ಮಾತ್ರ ಟಿಡಿಪಿ ಮೇಲುಗೈ ಸಾಧಿಸಿದ್ದು, ಅಲ್ಲಿ ಆ ಪಕ್ಷವು 12 ವಾರ್ಡ್‌ಗಳಲ್ಲಿ ಜಯಗಳಿಸಿದೆ. ಉಳಿದ 11 ಕ್ಷೇತ್ರಗಳನ್ನು ವೈಎಸ್‌ಆರ್‌ಪಿ ಗೆದ್ದಿದೆ. ಆದರೆ ಸರಕಾರದ ನಾಮನಿರ್ದೇಶಿತರ ಮತಗಳಿಂದಾಗಿ ನಗರಸಭಾಧ್ಯಕ್ಷ ಸ್ಥಾನವು ವೈಎಸ್‌ಆರ್‌ಪಿ ಪಾಲಾಗುವುದು ಬಹುತೇಕ ಖಚಿತವಾಗಿದೆ.
ರಾಜ್ಯದ 12 ನಗರಪಾಲಿಕೆಗಳು ಹಾಗೂ 75 ನಗರಸಭೆ ಮತ್ತು ನಗರಪಂಚಾಯತ್‌ಗಳಿಗೆ ಮಾರ್ಚ್ 10ರಂದು ಚುನಾವಣೆ ನಡೆದಿತ್ತು. 12 ನಗರಪಾಲಿಕೆಗಳ ಒಟ್ಟು 671 ವಾರ್ಡ್‌ಗಳ ಪೈಕಿ 90ರಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.
ನಗರಸಭೆ ಹಾಗೂ ನಗರಪಂಚಾಯತ್‌ಗಳ 490 ವಾರ್ಡ್‌ಗಳಲ್ಲಿ ಯೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.
ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ ಅವರ ಸ್ವಕ್ಷೇತ್ರವಾದ ಪುಲಿವೆಂದುಲಾದ ವ್ಯಾಪ್ತಿಯಲ್ಲಿರುವ ಪುಂಗನೂರು,ಪಿಡುಗಗುರುಲ್ಲಾ ಹಾಗೂ ಮಚೆರಾ ನಗರಸಭೆಗಳ ಎಲ್ಲಾ ಸ್ಥಾನಗಳಲ್ಲಿ ವೈಎಸ್‌ಆರ್‌ಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.







