ಮಾಜಿ ಕಾರ್ಪೊರೇಟರ್ ಶರೀಫ್ ಕೂಳೂರು ನಿಧನ

ಮಂಗಳೂರು, ಮಾ.15: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್, ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಮುಹಮ್ಮದ್ ಶರೀಫ್ ಕೂಳೂರು(75) ಸೋಮವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಷ್ಢಾವಂತ ಕಾರ್ಯಕರ್ತರಾಗಿದ್ದ ಶರೀಫ್ ಕೂಳೂರು ಪಕ್ಷದ ವಿವಿಧ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಮೂರು ಬಾರಿ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿದ್ದ ಅವರು ಆರೋಗ್ಯ ಮತ್ತು ಕಾಮಗಾರಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕುಂಜತ್ತಬೈಲ್, ಜ್ಯೋತಿನಗರ ಪ್ರದೇಶದ ನೀರಿನ ಸಮಸ್ಯೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಸ್ಥಳೀಯವಾಗಿ ‘ನೀರ್ ಸಾಬ್’ ಎಂದು ಗುರುತಿಸಲ್ಪಟ್ಟಿದ್ದರು. ರಾಜಕೀಯದಲ್ಲಿ ಸಕ್ರಿಯವಾಗಿದ್ದರೂ ಸಮಾಜಸೇವಕರಾಗಿ ಜನಾನುರಾಗಿಯಾಗಿದ್ದರು.
ಸಂತಾಪ: ಶರೀಫ್ ಕೂಳೂರು ನಿಧನಕ್ಕೆ ಮಾಜಿ ಮೇಯರ್, ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಹಮೀದ್ ಕಣ್ಣೂರು, ಕಾರ್ಪೊರೇಟರ್ ಅಶ್ರಫ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.





