ದ.ಕ.ಜಿಲ್ಲೆ : ಬ್ಯಾಂಕ್ ಉದ್ಯೋಗಿಗಳ ಮುಷ್ಕರ

ಮಂಗಳೂರು, ಮಾ.15: ಸಾರ್ವಜನಿಕ ರಂಗದ ಎರಡು ಬ್ಯಾಂಕ್ ಮತ್ತು ಒಂದು ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲು 2021ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿರುವ ನಡೆಯನ್ನು ಖಂಡಿಸಿ ದೇಶಾದ್ಯಂತ ನಡೆಯುವ ಮುಷ್ಕರದ ಭಾಗವಾಗಿ ಸೋಮವಾರ ದ.ಕ.ಜಿಲ್ಲೆಯಲ್ಲೂ ಬ್ಯಾಂಕ್ ಉದ್ಯೋಗಿಗಳು ಮುಷ್ಕರ ಆರಂಭಿಸಿದ್ದಾರೆ. ಮಂಗಳವಾರವೂ ಮುಷ್ಕರ ಮುಂದುವರಿಯಲಿದೆ.
ಮಂಗಳೂರು ನಗರದ ಸಹಿತ ಜಿಲ್ಲೆಯ ವಿವಿಧೆಡೆ ಸುಮಾರು 2 ಸಾವಿರಕ್ಕೂ ಅಧಿಕ ಬ್ಯಾಂಕ್ ಅಧಿಕಾರಿಗಳು, ನೌಕರರು ಸೋಮವಾರದ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ನಗರದ ಬಲ್ಮಠದಲ್ಲಿ ಸೋಮವಾರ ಕೆನರಾ ಬ್ಯಾಂಕ್‌ನ ವೃತ್ತ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಬ್ಯಾಂಕ್ ಅಧಿಕಾರಿಗಳು, ನೌಕರರು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಮಂಗಳೂರು ಮಿನಿ ವಿಧಾನ ಸೌಧದ ಮುಂದೆಯೂ ಧರಣಿ ನಡೆಸಿ ಗಮನ ಸೆಳೆದರು.
ಶನಿವಾರ ಮತ್ತು ರವಿವಾರವೂ ಬ್ಯಾಂಕ್‌ಗೆ ರಜೆ ಇದ್ದ ಕಾರಣ ಮತ್ತು ಸೋಮವಾರ ಮುಷ್ಕರ ಆರಂಭಗೊಂಡ ಕಾರಣ ಗ್ರಾಹಕರು ವಾರದ ಮೊದಲ ದಿನವೇ ಹಣಕಾಸಿನ ನಿರ್ವಹಣೆ ಮಾಡಲಾಗದೆ ಸಮಸ್ಯೆಯನ್ನು ಎದುರಿಸುವಂತಾಯಿತು. ತುರ್ತು ಹಣ ರವಾನೆ ಮತ್ತು ಪಡೆಯುವ ಸಲುವಾಗಿ ಗ್ರಾಹಕರು ಬಹುತೇಕ ಎಟಿಎಂಗಳ ಮುಂದೆ ಜಮಾಯಿಸಿದ್ದು ಕಂಡು ಬಂತು. ಕೆಲವು ಎಟಿಎಂಗಳಲ್ಲಿ ಸೋಮವಾರ ಬೆಳಗ್ಗೆಯೇ ಹಣ ಪಡೆಯಲಾಗದೆ ಗ್ರಾಹಕರು ಬರಿಗೈಯಲ್ಲಿ ಮರಳುವುದು ಮತ್ತು ಹೆಚ್ಚಿನ ಎಟಿಎಂಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿರುವುದು ಕಂಡು ಬಂತು.
ನಗರದ ಬಲ್ಮಠದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಬಿಒಎ ಇದರ ಡಿಜಿಎಸ್ ರಮೇಶ್ ನಾಯ್ಕ 1969ರಲ್ಲಿ 14 ಮತ್ತು 1980ರಲ್ಲಿ 6 ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಲಾಯಿತು. ಹಳ್ಳಿ ಪ್ರದೇಶ, ಬಡತನ ರೇಖೆಯಲ್ಲಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ನೀಡುವುದು ಇದರ ಮೂಲ ಉದ್ದೇಶವಾಗಿತ್ತು. ಅಲ್ಲದೆ ರೈತಾಪಿ ವರ್ಗವನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದಾಗಿತ್ತು. ಇಂತಹ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುತ್ತಿರುವುದು ದೊಡ್ಡ ದುರಂತವಾಗಿದೆ ಎಂದರು.
ಪ್ರಸ್ತುತ ಸರಕಾರದ ಪ್ರತಿಯೊಂದು ಯೋಜನೆಗಳು ಬ್ಯಾಂಕ್ ಮೂಲಕವೇ ಅನುಷ್ಠಾನಗೊಳ್ಳುತ್ತಿದೆ. ಸರಕಾರದ ಪ್ರತಿಯೊಂದು ಯೋಜನೆಗಳ ಯಶಸ್ಸಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಹೆಚ್ಚಿನ ಪಾಲುದಾರಿಕೆ ಹೊಂದಿರುತ್ತದೆ. ಈ ಈ ಆ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುತ್ತಿರುವುದು ದುರದೃಷ್ಟಕರ ಎಂದರು.
ಸಿಬಿಒಎ ಇದರ ಮತ್ತೋರ್ವ ಡಿಜಿಎಸ್ ಅಮರ್ ಎನ್.ಎ. ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುತ್ತಿರುವುದು ದೊಡ್ಡ ಮೋಸವಾಗಿದೆ. ಬಂಡವಾಳಶಾಹಿಗಳು ಸೇರಿಕೊಂಡು ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಅಪಾಯದ ಅಂಚಿಗೆ ತಳ್ಳುತಿದ್ದಾರೆ. ಕೊರೋನದ ಸಂದರ್ಭ ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಜನರಿಗೆ ಅತೀ ಹೆಚ್ಚಿನ ಮಟ್ಟದಲ್ಲಿ ಸೇವೆಯನ್ನು ನೀಡಿದೆ. ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗೀಕರಣ ಮಾಡಿದರೆ ದೇಶದ ಆರ್ಥಿಕತೆ ನೆಲಕಚ್ಚುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಈ ಸಂದರ್ಭ ಸಿಬಿಒಎ ಇದರ ಎಜಿಎಸ್ ಸ್ವಾತಿ ಕೆ.ಎಸ್., ಎಐಎನ್‌ಬಿಒಎಫ್ ಜಿಲ್ಲಾ ಅಧ್ಯಕ್ಷ ಸುಧೀರ್ ಕುಮಾರ್ ಬಿ., ಅಧ್ಯಕ್ಷ ಗಿರೀಶ್ ಕುಮಾರ್, ಸಿಬಿಒಎ ಮಂಗಳೂರು ಪ್ರಾದೇಶಿಕ ಕಾರ್ಯದರ್ಶಿ ಹರೀಶ್ ಶೆಟ್ಟಿ, ಪುತ್ತೂರಿನ ಪ್ರಾದೇಶಿಕ ಕಾರ್ಯದರ್ಶಿ ಶಮೀನಾ, ರವಿ ಪಿಂಟೋ ಉಪಸ್ಥಿತರಿದ್ದರು.






.gif)
.gif)
.gif)
.gif)



