ಬೆಂಗಳೂರು, ಮುಂಬೈ, ದಿಲ್ಲಿ, ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಉಳಿದಿರುವ ಪಾಲನ್ನು ಮಾರಾಟ ಮಾಡಲಿರುವ ಕೇಂದ್ರ

ಹೊಸದಿಲ್ಲಿ: ದಿಲ್ಲಿ, ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಉಳಿದಿರುವ ತನ್ನ ಪಾಲನ್ನು ಮಾರಾಟ ಮಾಡುವ ಉದ್ದೇಶ ಕೇಂದ್ರ ಸರಕಾರಕ್ಕಿದೆ. ಹೆಚ್ಚುವರಿ ಹಣಕಾಸು ಕ್ರೋಢೀಕರಿಸುವ ಉದ್ದೇಶದ ಸರಕಾರದ ಮಹತ್ವಾಕಾಂಕ್ಷೆಯ ರೂ 2.5 ಲಕ್ಷ ಕೋಟಿ ಆಸ್ತಿ ನಗದೀಕರಣ ಯೋಜನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಮೇಲಿನ ಮೂರು ವಿಮಾನ ನಿಲ್ದಾಣಗಳಲ್ಲಿನ ಸರಕಾರದ ಪಾಲನ್ನು ಮಾರುವ ಜತೆಗೆ 2021-22ರಲ್ಲಿ 13 ಇತರ ವಿಮಾನ ನಿಲ್ದಾಣಗಳನ್ನೂ ಖಾಸಗೀಕರಣಕ್ಕಾಗಿ ಗುರುತಿಸಲಾಗಿದೆ ಎಂದು ಮೂಲಗಳು ನೀಡಿದ ಮಾಹಿತಿಯ ಆಧಾರದಲ್ಲಿ ಬಿಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ. ಈ ಕುರಿತಾದ ಪ್ರಸ್ತಾಪ ಮುಂದಿನ ಕೆಲ ದಿನಗಳಲ್ಲಿ ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟದ ಮುಂದೆ ಬರಲಿದೆ ಎಂಬ ಮಾಹಿತಿಯೂ ಇದೆ.
ಮೊದಲ ಹಂತದ ವಿಮಾನ ನಿಲ್ದಾಣ ಖಾಸಗೀಕರಣದಲ್ಲಿ ಅದಾನಿ ಸಮೂಹವು ಲಕ್ನೋ, ಅಹ್ಮದಾಬಾದ್, ಜೈಪುರ್, ಮಂಗಳೂರು, ತಿರುವನಂತಪುರಂ ಹಾಗೂ ಗುವಾಹಟಿ ವಿಮಾನ ನಿಲ್ದಾಣಗಳನ್ನು ಪಡೆದುಕೊಂಡಿತ್ತು.
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದಾನಿ ಸಮೂಹ ಶೇ 74ರಷ್ಟು ಪಾಲು ಹೊಂದಿದ್ದರೆ ಉಳಿದ ಶೇ 26ರಷ್ಟು ಪಾಲನ್ನು ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊಂದಿದೆ.
ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಿಎಂಆರ್ ಸಮೂಹ ಶೇ 54ರಷ್ಟು ಪಾಲು, ಎಎಐ ಶೇ 26ರಷ್ಟು ಹಾಗೂ ಫ್ರಪೋರ್ಟ್ ಎಜಿ ಮತ್ತು ಎರಮನ್ ಮಲೇಷ್ಯಾ ತಲಾ ಶೇ 10ರಷ್ಟು ಪಾಳು ಹೊಂದಿವೆ.
ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ 26ರಷ್ಟು ಪಾಲನ್ನು ಎಎಐ ಹಾಗೂ ಆಂಧ್ರ ಸರಕಾರ ಹೊಂದಿವೆ. ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಶೇ 26ರಷ್ಟು ಪಾಲನ್ನು ರಾಜ್ಯ ಸರಕಾರ ಮತ್ತು ಎಎಐ ಹೊಂದಿದೆ.







