ಪಂಚಮಸಾಲಿ ಮೀಸಲಾತಿ ವಿಚಾರ: ಸದನದಲ್ಲಿ ಸಿಎಂ ಭರವಸೆಯ ಬಳಿಕ ಹೋರಾಟ ಕೈ ಬಿಟ್ಟ ಶಾಸಕ ಯತ್ನಾಳ್

ಬೆಂಗಳೂರು, ಮಾ.25: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಅವರು ಸದನದಲ್ಲಿ ಮತ್ತೊಮ್ಮೆ ಧ್ವನಿ ಎತ್ತಿದ್ದು, ಈ ಬಗ್ಗೆ ಸರಕಾರ ಭರವಸೆ ನೀಡಿದ ಯತ್ನಾಳ್ ಅದನ್ನು ಸ್ವೀಕರಿಸಿ ಹೋರಾಟವನ್ನು ಕೈ ಬಿಡುವುದಾಗಿ ಘೋಷಿಸಿದರು.
ಸೋಮವಾರ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆಯೇ ಶಾಸಕ ಬಸನಗೌಡ ಯತ್ನಾಳ್ ಅವರು ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ವಿಷಯವನ್ನು ಉಲ್ಲೇಖಿಸಿದರು. ಇನ್ನು 6 ತಿಂಗಳಲ್ಲಿ ವರದಿ ತರಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ “ಹಿಂದುಳಿದ ವರ್ಗಗಳ ಆಯೋಗದ ವರದಿ ಹಾಗೂ ನಿವೃತ್ತ ನ್ಯಾಯಾಧೀಶರ ವರದಿ ಬಂದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಸರಕಾರದ ಭರವಸೆಯನ್ನು ಅಭಿನಂದಿಸಿದ ಶಾಸಕ ಯತ್ನಾಳ್, ಸಿಎಂ ಅವರು ಸ್ಪಷ್ಟ ಭರವಸೆ ನೀಡಿದ್ದಾರೆ. ಅದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು 6 ತಿಂಗಳು ಈ ಹೋರಾಟ ಸ್ಥಗಿತಗೊಳಿಸುತ್ತೇವೆ. ಧರಣಿ ಕೈ ಬಿಡಲು ಸ್ವಾಮೀಜಿಯೊಂದಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.





