ನಾನು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ‘ಸೇವಾಕಾಂಕ್ಷಿ’: ಮಹೇಶ್ ಜೋಶಿ
"ಒಂದೇ ಒಂದು ಕನ್ನಡ ಶಾಲೆ ಮುಚ್ಚಲು ಅವಕಾಶ ನೀಡಲಾರೆ"

ಉಡುಪಿ, ಮಾ.15: ಮೇ 9ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ‘ಸೇವಾಕಾಂಕ್ಷಿ’ಯಾಗಿ ನಾನು ಸ್ಪರ್ಧಿಸುತಿದ್ದೇನೆ. ನಾನು ಬಲಪಂಥೀಯನೂ ಅಲ್ಲ, ಎಡಪಂಥೀಯನೂ ಅಲ್ಲ. ನಾನು ಮಾನವ ಪಂಥದವನಾಗಿ, ಕನ್ನಡ ಪಂಥದವನಾಗಿ ಕನ್ನಡದ ಸೇವೆ ಸಲ್ಲಿಸುತ್ತೇನೆ ಎಂದು ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಜೋಶಿ ಹೇಳಿದ್ದಾರೆ.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಹೇಶ್ ಜೋಶಿ, ಕಸಾಪದ ಮತದಾರರನ್ನು ಭೇಟಿಯಾಗಿ ಮತ ಯಾಚಿಸಲು ಇಂದು ಉಡುಪಿಗೆ ಭೇಟಿ ನೀಡಿದ್ದು, ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಾನು ಅಧಿಕಾರದ ಲಾಲಸೆಗಾಗಿ, ವಿಸಿಟಿಂಗ್ ಕಾರ್ಡ್‌ಗಾಗಿ ಅಥವಾ ಪುನರ್ವಸತಿಗಾಗಿ ಹಿಂಬಾಗಿಲಿನ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿಲ್ಲ. ಕಸಾಪವನ್ನು ನಿಜವಾಗಿಯೂ ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವುದೇ ನನ್ನ ಆದ್ಯತೆಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿರುವ ಪ್ರಾದೇಶಿಕ ತಾರತಮ್ಯವನ್ನು ಹೋಗಲಾಡಿಸುವುದು ಸಹ ನನ್ನ ಗುರಿಯಾಗಿದೆ ಎಂದು ಜೋಶಿ ನುಡಿದರು.
ಕನ್ನಡ ಅನ್ನದ ಭಾಷೆಯಾಗಬೇಕು: ಮುಂದಿನ ಐದು ವರ್ಷಗಳ ಅವಧಿಗೆ ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ, ನನ್ನ ಅವಧಿಯಲ್ಲಿ ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆಯನ್ನು ಮುಚ್ಚಿಸಲು ಅವಕಾಶ ನೀಡುವುದಿಲ್ಲ. ಅಲ್ಲದೇ ಈಗಾಗಲೇ ಮುಚ್ಚಿರುವ ಕನ್ನಡ ಶಾಲೆಗಳನ್ನು ಮತ್ತೆ ತೆರೆಯಲು ಸಾದ್ಯವಿರುವ ಎಲ್ಲಾ ಪ್ರಯತ್ನ ನಡೆಸುತ್ತೇನೆ ಎಂದು ಅವರು ಭರವಸೆ ನೀಡಿದರು.
ರಾಜ್ಯದಲ್ಲಿ ಕನ್ನಡವನ್ನು ಅನ್ನದ ಭಾಷೆಯನ್ನಾಗಿಸುವುದು ನನ್ನ ಪ್ರಥಮ ಆದ್ಯತೆಯಾಗಿರುತ್ತದೆ. ಕನ್ನಡಕ್ಕೆ ಏನೇ ಅನ್ಯಾಯವಾದರೂ, ಯಾವುದೇ ಮಟ್ಟಕ್ಕೆ ಬೇಕಿದ್ದರೂ ಹೋಗಿ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ. ಕನ್ನಡ ಮಾಧ್ಯಮವನ್ನು ಶಿಕ್ಷಣ ನೀತಿಯಾಗಿಸಲು ಸರಕಾರದೊಂದಿಗೆ ಚರ್ಚಿಸುತ್ತೇನೆ ಎಂದರು.
ನಾನು ಸಮಗ್ರ ಕನ್ನಡಿಗರ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತೇನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಈವರೆಗೆ ಸಿಗದಿರುವ ಸೌಲಭ್ಯಗಳನ್ನು ದೊರಕಿಸಲು ಪ್ರಯತ್ನಿಸುತ್ತೇನೆ. ಕನ್ನಡಿಗರಿಗೆ ಕನ್ನಡ, ಕನ್ನಡ ನೆಲವೇ ಅನ್ನ, ಭಾಷೆಯಾಗಬೇಕು ಎಂಬುದು ನನ್ನ ಆಶಯ ಎಂದವರು ನುಡಿದರು.
2 ಕನ್ನಡ ಸಮ್ಮೇಳನಕ್ಕೆ ಮಹಿಳೆ ಅಧ್ಯಕ್ಷೆ: ಒಂದು ವೇಳೆ ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ನನ್ನ ಐದು ವರ್ಷಗಳ ಅವಧಿಯಲ್ಲಿ ಬರುವ ಐದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡು ಸಮ್ಮೇಳನಕ್ಕೆ ಮಹಿಳೆಯರನ್ನು ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಮಹೇಶ್ ಜೋಶಿ ಭರವಸೆ ನೀಡಿದರು.
ಕಾಲಕಾಲಕ್ಕೆ ಹಾಗೂ ನಿಯಮಿತವಾಗಿ ಸಾಹಿತ್ಯ ಸಮ್ಮೇಳನಗಳು ನಡೆಯಲು ಅನುಕೂಲ ವಾಗುವಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ‘ಕನ್ನಡ ಭವನ’ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ. ಸರಕಾರದೊಂದಿಗೆ ಸೌಹಾರ್ದಯುತ ಸಂಬಂಧವಿಟ್ಟು ಕೊಂಡು ಕನ್ನಡ ಕಟ್ಟುವ ಕೆಲಸಕ್ಕೆ ಹಣದ ಅಡಚಣೆ ಬಾರದಂತೆ ನೋಡಿಕೊಳ್ಳುತ್ತೇನೆ ಎಂದರು.
ರಾಜ್ಯದ 31 ಜಿಲ್ಲೆಗಳ ಪೈಕಿ ಈಗಾಗಲೇ 15 ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಕಸಾಪ ಮತದಾರರನ್ನು ಭೇಟಿಯಾಗಿ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ. ನಾಳೆ ಕೊಡಗಿಗೆ ಭೇಟಿ ನೀಡಲಿದ್ದು, ಬಳಿಕ ಉತ್ತರ ಕರ್ನಾಟಕಕ್ಕೆ ತೆರಳಿ ಮತಯಾಚಿಸುವುದಾಗಿ ಜೋಶಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪದ ಜಿಲ್ಲಾ ಪದಾಧಿಕಾರಿಗಳಾದ ನಾರಾಯಣ ಮಡಿ, ಪುಂಡಲೀಕ ಮರಾಠೆ, ಸುಬ್ರಹ್ಮಣ್ಯ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ, ವಿಶ್ವನಾಥ ಶೆಣೈ, ರವಿರಾಜ್ ಎಚ್.ಪಿ., ನಾಗರಾಜ ಹೆಬ್ಬಾರ್, ಭುವನಪ್ರಸಾದ ಹೆಗ್ಡೆ ಹಾಗೂ ಮಂಗಳೂರಿನ ಡಾ.ಮಂಜುನಾಥ ರೇವಣ್ಕರ್ ಉಪಸ್ಥಿತರಿದ್ದರು.
ಕಸಾಪದಲ್ಲಿ 3.10 ಲಕ್ಷ ಸದಸ್ಯರು
ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರ ಸ್ಥಾನಗಳಿಗೆ ಮೇ 9ರಂದು ನಡೆಯುವ ಚುನಾವಣೆಯಲ್ಲಿ ಪರಿಷತ್‌ನ 3,10,000 ಮಂದಿ ಸದಸ್ಯರು ಮತದಾರರಾಗಿದ್ದಾರೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತ್ಯಧಿಕ 36,389 ಮಂದಿ ಸದಸ್ಯರಿದ್ದರೆ, ಉಡುಪಿಯಲ್ಲಿ ಕನಿಷ್ಠ ಅಂದರೆ 1,984 ಮಂದಿ ಸದಸ್ಯರಿದ್ದು, ಅಂದು ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ.







