ಖಾಸಗೀಕರಣ ವಿರೋಧಿಸಿ ರಾಜ್ಯದೆಲ್ಲೆಡೆ ಬ್ಯಾಂಕ್ ನೌಕರರ ಮುಷ್ಕರ: ಗ್ರಾಹಕರ ಪರದಾಟ

ಖಾಸಗೀಕರಣ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬ್ಯಾಂಕ್ ನೌಕರರು
ಬೆಂಗಳೂರು, ಮಾ.15: ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸಲು ಹೊರಟಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ನೇತೃತ್ವದಲ್ಲಿ ರಾಜ್ಯದೆಲ್ಲೆಡೆ ಬ್ಯಾಂಕ್ ನೌಕರರು ಕೆಲಸಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸಿದರು.
ಸೋಮವಾರ ಕೆಲಸದಿಂದ ದೂರ ಉಳಿದ ಬಹುತೇಕ ನೌಕರರು, ರಾಜಧಾನಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾವಣೆಗೊಂಡರೆ, ಇನ್ನು ಹಲವರು, ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆದ ಹೋರಾಟಗಳಲ್ಲಿ ಪಾಲ್ಗೊಂಡು, ಮುಷ್ಕರ ಬೆಂಬಲಿಸಿದರು.
ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ವಿವಿಧೆಡೆ ಸಾವಿರಾರು ಬ್ಯಾಂಕ್ ಶಾಖೆಗಳಲ್ಲಿ ಸೋಮವಾರ ಕಾರ್ಯನಿರ್ವಹಣೆ ಇರಲಿಲ್ಲ. ಇದರ ಪರಿಣಾಮ, ಗ್ರಾಹಕರು ಬ್ಯಾಂಕ್ ಚಟುವಟಿಕೆಗಳಿಲ್ಲದೆ, ತೊಂದರೆ ಅನುಭವಿಸಿದರು.
ಇನ್ನು, ಕಳೆದ ಎರಡು ದಿನಗಳಿಂದ ಬ್ಯಾಂಕ್ಗಳಿಗೆ ಸರಕಾರಿ ರಜೆ ಎಂದು ಸುಮ್ಮನಿದ್ದ ಕೆಲ ಗ್ರಾಹಕರು, ಸೋಮವಾರ ಮುಷ್ಕರದ ಮಾಹಿತಿ ಇಲ್ಲದೇ ಬ್ಯಾಂಕ್ಗಳ ಕಡೆ ಮುಖ ಮಾಡಿ ಬರಿಗೈಲಿ ವಾಪಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮುಷ್ಕರವನ್ನುದ್ದೇಶಿಸಿ ಮಾತನಾಡಿದ ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆ ರಾಜ್ಯ ಸಂಚಾಲಕ ಎಸ್.ಕೆ.ಶ್ರೀನಿವಾಸ್, ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ(ಎಐಬಿಇಎ) ಸೇರಿದಂತೆ 9 ಬ್ಯಾಂಕ್ ಯೂನಿಯನ್ಗಳ ಒಕ್ಕೂಟ (ಯುಎಫ್ಬಿಯು) ಈ ಮುಷ್ಕರಕ್ಕೆ ಕರೆ ನೀಡಿದ್ದು, ನಾಳೆಯೂ(ಮಂಗಳವಾರ) ರಾಜಧಾನಿ ಬೆಂಗಳೂರು ಸೇರಿದಂತೆ ಗ್ರಾಮೀಣ ಭಾಗದ ಬ್ಯಾಂಕುಗಳ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ನಲ್ಲಿ ಸರಕಾರದ ಬಂಡವಾಳ ಹಿಂದೆಗೆತ ಪ್ರಕ್ರಿಯೆ ಭಾಗವಾಗಿ ಸಾರ್ವಜನಿಕ ರಂಗದ ಎರಡು ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುವುದಾಗಿ ಘೋಷಿಸಿರುವುದು ಸೂಕ್ತವಾದ ಕ್ರಮವಲ್ಲ ಎಂದು ವಾಗ್ದಾಳಿ ನಡೆಸಿದರು.
ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆಯ ರಮೇಶ್ ಮಾತನಾಡಿ, ಸರಕಾರಿ ಸಂಸ್ಥೆಗಳನ್ನು ನಡೆಸಲು ಅವುಗಳನ್ನು ಖಾಸಗೀಕರಣಗೊಳಿಸುವುದು ಅಗತ್ಯ ಎಂದು ಸರಕಾರ ಹೇಳಿದೆ. ಆ ಸಂಸ್ಥೆಗಳನ್ನು ಖಾಸಗೀಕರಣ ಮಾಡದಿದ್ದರೆ ನೌಕರರ ವೇತನ ನೀಡುವುದು ಕಷ್ಟವಾಗಲಿದೆ ಹಾಗೂ ನೌಕರರ ಉದ್ಯೋಗ ಉಳಿಸಿಕೊಳ್ಳುವ ದೃಷ್ಟಿಯಿಂದ ಈ ಕ್ರಮ ಉತ್ತಮ ಎಂದು ಸರಕಾರ ವಾದಿಸುತ್ತಿರುವುದು ಸರಿಯಲ್ಲ.
ಖಾಸಗೀಕರಣ ಮಾಡುವುದರಿಂದ ಜನಸಾಮಾನ್ಯರು ಹಣವನ್ನು ಲೂಟಿ ಮಾಡುವುದಕ್ಕೆ ಅವಕಾಶ ನೀಡಿದಂತಾಗುತ್ತದೆ. ಠೇವಣಿದಾರರ ಹಿತಾಸಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಉದ್ಯೋಗದ ಅವಕಾಶ ಹಾಗೂ ಮೀಸಲಾತಿಯ ಮೇಲೂ ಪರಿಣಾಮ ಬೀರುತ್ತದೆ. ಶಾಖೆಗಳನ್ನು ಮುಚ್ಚುವುದರಿಂದ, ಗ್ರಾಹಕರಿಗೆ ತೊಂದರೆಯಾಗಲಿದೆ ಎಂದರು.






.jpg)
.jpg)
.jpg)
.jpg)
.jpg)
.jpg)

