ತೃತೀಯ ಲಿಂಗಿಯ ಎನ್‌ಸಿಸಿ ಸೇರ್ಪಡೆಗೆ ಕೇರಳ ಹೈಕೋರ್ಟ್ ಆದೇಶ

ತಿರುವನಂತಪುರ,ಮಾ.15: ತೃತೀಯ ಲಿಂಗಿ ಹಿನಾ ಹನೀಫಾ ಅವರು ತನ್ನನ್ನು ಮಹಿಳೆ ಎಂದು ಗುರುತಿಸಿಕೊಂಡಿರುವುದರಿಂದ ಅವರನ್ನು ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್‌ಸಿಸಿ)ನ ಮಹಿಳಾ ಘಟಕಕ್ಕೆ ಸೇರಿಸಿಕೊಳ್ಳುವಂತೆ ಕೇರಳ ಉಚ್ಚ ನ್ಯಾಯಾಲಯವು ಸೋಮವಾರ ಆದೇಶಿಸಿದೆ.
ಪುರುಷರು ಮತ್ತು ಮಹಿಳೆಯರು ಮಾತ್ರ ಕೆಡೆಟ್‌ಗಳಾಗಿ ಎನ್‌ಸಿಸಿಗೆ ಸೇರಲು ಅವಕಾಶ ನೀಡಿರುವ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳನ್ನು ಉಲ್ಲೇಖಿಸದಿರುವ ಎನ್‌ಸಿಸಿ ಕಾಯ್ದೆ 1948ರ ಕಲಂ 6ನ್ನು ಪ್ರಶ್ನಿಸಿ ಹಿನಾ 2020,ಅಕ್ಟೋಬರ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ.ಅನು ಶಿವರಾಮನ್ ಅವರು ಈ ಆದೇಶವನ್ನು ಹೊರಡಿಸಿದರು. ಶಾಲಾದಿನಗಳಿಂದಲೂ ತಾನು ಎನ್‌ಸಿಸಿಯ ಸಕ್ರಿಯ ಸದಸ್ಯೆಯಾಗಿದ್ದೇನೆ ಮತ್ತು ಪ್ರಮಾಣಪತ್ರವನ್ನೂ ಪಡೆದಿದ್ದೇನೆ ಎಂದೂ ಅವರು ತನ್ನ ಅರ್ಜಿಯಲ್ಲಿ ಹೇಳಿದ್ದರು.
ತನ್ನನ್ನು ಮಹಿಳೆಯೆಂದು ಗುರುತಿಸಿಕೊಂಡಿರುವ ಹಿನಾ ಲಿಂಗ ಮರುರಚನೆ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದಾರೆ,ಓರ್ವ ತೃತೀಯ ಲಿಂಗಿಯಾಗಿ ಎನ್‌ಸಿಸಿಗೆ ಸೇರ್ಪಡೆಗೊಳ್ಳಲು ಆಕೆ ಖಂಡಿತವಾಗಿಯೂ ಹಕ್ಕು ಹೊಂದಿದ್ದಾರೆ ಎಂದು ನ್ಯಾಯಾಲಯವು ತೀರ್ಪಿನಲ್ಲಿ ತಿಳಿಸಿದೆ.
ತೃತೀಯ ಲಿಂಗಿ ಸಮುದಾಯದ ವಿರುದ್ಧ ತಾರತಮ್ಯವನ್ನು ನಿಷೇಧಿಸಿರುವ ತೃತೀಯ ಲಿಂಗಿ ವ್ಯಕ್ತಿಗಳ(ಹಕ್ಕುಗಳ ರಕ್ಷಣೆ) ಕಾಯ್ದೆ 2019ರ ನಿಯಮಗಳಿಂದ ಎನ್‌ಸಿಸಿ ಕಾಯ್ದೆಯು ಪ್ರತ್ಯೇಕವಾಗಿರುವಂತಿಲ್ಲ ಎಂಬ ಮಹತ್ವದ ಅಭಿಪ್ರಾಯವನ್ನು ತೀರ್ಪು ವ್ಯಕ್ತಪಡಿಸಿದೆ.







