2019ರಿಂದ 2,000 ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಿಲ್ಲ: ಅನುರಾಗ್ ಠಾಕೂರ್

ಹೊಸದಿಲ್ಲಿ, ಮಾ. 15: ಆರ್ಥಿಕತೆಯಲ್ಲಿ ಕಪ್ಪು ಹಣ ಚಲಾವಣೆ ನಿಗ್ರಹಿಸುವ ಹಾಗೂ ದಾಸ್ತಾನು ತಡೆಯುವ ಪ್ರಯತ್ನವಾಗಿ 2019 ಎಪ್ರಿಲ್‌ನಿಂದ 2019 ಎಪ್ರಿಲ್‌ನಿಂದ 2 ಸಾವಿರ ರೂಪಾಯಿಯ ಹೊಸ ನೋಟುಗಳನ್ನು ಮುದ್ರಿಸಿಲ್ಲ ಎಂದು ಕೇಂದ್ರ ಸರಕಾರ ಸೋಮವಾರ ಹೇಳಿದೆ. ಲೋಕಸಭೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ಕೇಂದ್ರದ ಸಹಾಯಕ ಸಚಿವ ಅನುರಾಗ್ ಠಾಕೂರ್, ಸಾರ್ವಜನಿಕರ ವಹಿವಾಟಿನ ಬೇಡಿಕೆಗೆ ಅನುಕೂಲಕರವಾಗಿ ಅಪೇಕ್ಷಿತ ಮುಖಬೆಲೆಯ ಮಿಶ್ರಣವನ್ನು ಕಾಯ್ದುಗೊಳ್ಳಲು ನಿರ್ದಿಷ್ಟ ಮುಖಬೆಲೆಯ ಬ್ಯಾಂಕ್ ನೋಟುಗಳ ಮುದ್ರಣದ ಬಗ್ಗೆ ಸರಕಾರ ಆರ್‌ಬಿಐಯೊಂದಿಗೆ ಸಮಾಲೋಚನೆ ನಡೆಸಿ ನಿರ್ಧರಿಸುತ್ತದೆ ಎಂದರು.
‘‘2019-20 ಹಾಗೂ 2020-21ರ ಸಂದರ್ಭ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಯಾವುದೇ ಮುದ್ರಣಾಲಯಗಳಿಗೆ ಆದೇಶ ನೀಡಿಲ್ಲ’’ ಎಂದು ಅವರು ಹೇಳಿದ್ದಾರೆ.
ಆರ್ಥಿಕತೆಯಲ್ಲಿ ಅತ್ಯಧಿಕ ಮುಖಬೆಲೆಯ ನೋಟುಗಳ ಪ್ರಮಾಣ ಕಡಿಮೆಯಾಗಿರುವ ಹೊರತಾಗಿಯೂ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. 2018 ಮಾರ್ಚ್ 30ರಂದು 2 ಸಾವಿರ ರೂ. ಮುಖಬೆಲೆಯ 3,362 ದಶಲಕ್ಷ ನೋಟುಗಳು ಚಲಾವಣೆಯಲ್ಲಿ ಇತ್ತು. ಆದರೆ, 2021 ಫೆಬ್ರವರಿ 26ರಂದು ಕೇವಲ 2 ಸಾವಿರ ರೂ. ಮುಖಬೆಲೆಯ ಕೇವಲ 2,499 ದಶಲಕ್ಷ ನೋಟುಗಳು ಚಲಾವಣೆಯಲ್ಲಿ ಇತ್ತು ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದರು.







