ಕೇರಳದಿಂದ ಬರುವವರಿಗೆ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ: ದ.ಕ. ಜಿಲ್ಲಾಧಿಕಾರಿ

ಮಂಗಳೂರು, ಮಾ.15: ಕೇರಳದಿಂದ ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬರು 72 ಗಂಟೆಯೊಳಗೆ ನಡೆಸಲಾದ ಆರ್‌ಟಿ-ಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿ ಹೊಂದಿರುವುದು ಕಡ್ಡಾಯವಾಗಿದೆ ಹಾಗೂ ಆರ್‌ಎಟಿ ಪರೀಕ್ಷಾ ವರದಿಗೆ ಅವಕಾಶವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹೊರ ರಾಜ್ಯದಿಂದ ಆಗಮಿಸುವವರಿಗೆ ವಿಶೇಷ ಸರ್ವೇಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಕುರಿತು ನಡೆದ ವೀಡಿಯೊ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದಿಂದ ಆಗಮಿಸುವ ವ್ಯಕ್ತಿಗಳು ಆರ್‌ಟಿ-ಪಿಸಿಆರ್ ನೆಗೆಟಿವ್ ಪರೀಕ್ಷಾ ವರದಿಯನ್ನು ಹೊಂದುವುದು ಕಡ್ಡಾಯಗೊಳಿಸುವಂತೆ ಹೇಳಿದರು.
ಹೊರ ರಾಜ್ಯಗಳಿಂದ ಬರುವ ಎಲ್ಲ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡುವುದರೊಂದಿಗೆ 15 ದಿನಗಳಿಗೊಮ್ಮೆ ಪರೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಒಂದು ವೇಳೆ ವಿದ್ಯಾರ್ಥಿಗಳು ತಮ್ಮ ಸ್ವಂತ ಊರಿಗೆ ಹೋದಂತಹ ಸಂದರ್ಭದಲ್ಲಿ ಮರಳಿ ಜಿಲ್ಲೆಗೆ ಬರುವಾಗ ಕಡ್ಡಾಯವಾಗಿ ನೆಗೆಟಿವ್ ಪರೀಕ್ಷಾ ವರದಿಯನ್ನು ತರಬೇಕು ಹಾಗೂ ಅವರ ಜೊತೆಗೆ ಜಿಲ್ಲೆಗೆ ಆಗಮಿಸುವ ಪೋಷಕರು ನೆಗೆಟಿವ್ ವರದಿಯನ್ನು ತರಬೇಕು ಎಂದು ಹೇಳಿದರು.
ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಸ್ವಯಂ ಮೇಲ್ವಿಚಾರಣೆ ನಡೆಸಿಕೊಂಡು ಜ್ವರ, ಶೀತ, ಕೆಮ್ಮು, ಗಂಟಲು ನೋವು, ಉಸಿರಾಟದ ಸಮಸ್ಯೆ ಹಾಗೂ ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈಧ್ಯಕೀಯ ನೆರವು ಪಡೆಯಬೇಕು. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ಹೆಚ್ಚು-ಹೆಚ್ಚು ಕೋವಿಡ್ ಟೆಸ್ಟ್‌ಗಳನ್ನು ಮಾಡುವುದರೊಂದಿಗೆ ರೋಗಿಗಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಬೇಕು. ಅಲ್ಲದೆ, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವ ಕಾರ್ಯ ಚುರುಕುಗೋಳಿಸಬೇಕು. ಪ್ರತಿಯೊಬ್ಬ ನಾಗರಿಕನೂ ತಪ್ಪದೇ ಮಾಸ್ಕ್ ಧರಿಸಿಕೊಳ್ಳುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೈಗಳ ಸ್ವಚ್ಛತೆಗೆ ಆಧ್ಯತೆ ನೀಡಬೇಕು ಎಂದರು.
ಟಾಸ್ಕ್ ಫೋರ್ಸ್ ರಚನೆ: ಗ್ರಾಮ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ಗಳು ರಚನೆಗೊಂಡಿದ್ದು, ತಾಲೂಕು ಮಟ್ಟದಲ್ಲೂ ವಾರ್ಡ್ ಮಟ್ಟದ ಟಾಸ್ಕ್ ಫೋರ್ಸ್ ರಚನೆಯಾಗುವುದರೊಂದಿಗೆ ಶೀತ, ಉಸಿರಾಟ ತೊಂದರೆ ಪ್ರಕರಣಗಳು ಇವೆ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು. ವ್ಯಾಕ್ಸಿನೇಷನ್ ಬಗ್ಗೆಯೂ ತಾಲೂಕು ಆರೋಗ್ಯ ಅಧಿಕಾರಿಗಳು, ತಹಶೀಲ್ದಾರ್‌ರು ಸೇರಿ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಸಾರ್ವಜನಿಕರ ನೆರವು ಪಡೆದುಕೊಂಡು ಮಾಹಿತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು (ಪ್ರಭಾರ) ದಿನೇಶ್ ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪಾ ಭೋವಿ, ತಾಲೂಕು ಆರೋಗ್ಯಾಧಿಕಾರಿಗಳು, ತಹಶೀಲ್ದಾರರು ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾಭ್ಯಾಸಕ್ಕೆ ಸಂಚರಿಸುವವರ ಮಾಹಿತಿ ಸಂಗ್ರಹಿಸಿ: ಸಿಇಒ
ಕೇರಳ ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗಿವೆ ಈ ಹಿನ್ನಲೆಯಲ್ಲಿ ಜಿಲ್ಲೆಗೆ ಹೊಂದಿಕೊಂಡಿರುವ ಚೆಕ್‌ಪೋಸ್ಟ್‌ಗಳಲ್ಲಿ ಹಾಗೂ ಇನ್ನು ಹೆಚ್ಚಿನ ಅವಶ್ಯಕತೆ ಇರುವಲ್ಲಿ ನೂತನವಾಗಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಿ ಪ್ರತಿಯೊಬ್ಬರ ಕೋವಿಡ್-19 ವರದಿಯನ್ನು ಪರಿಶೀಲಿಸಬೇಕು. ಪ್ರತಿದಿನ ದೈನಂದಿನ ಕೆಲಸಕಾರ್ಯಗಳಿಗೆ ಹಾಗೂ ವಿದ್ಯಾಭ್ಯಾಸಕ್ಕೆ ಸಂಚರಿಸುವವರ ಮಾಹಿತಿಯನ್ನು ಕ್ರೋಢೀಕರಿಸಿಕೊಂಡು ಕಡತದಲ್ಲಿ ನಮೂದಿಸಬೇಕು ಎಂದು ಜಿಪಂ ಸಿಇಒ ಡಾ.ಕುಮಾರ್ ಸೂಚಿಸಿದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಾಗೂ ನಗರ ಸ್ಥಳೀಯ, ಸಂಸ್ಥೆಗಳ ಮಟ್ಟದಲ್ಲಿ ಈಗಾಗಲೇ ರಚಿಸಲಾಗಿರುವ ಟಾಸ್ಕ್‌ಫೋರ್ಸ್ ಸಮಿತಿಗಳು ಆಗಿಂದಾಗೆ ಸಭೆ ನಡೆಸುವುದರೊಂದಿಗೆ ಕೋವಿಡ್ ಸೊಂಕು ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರದಂತೆ ಕಂದಾಯ ಇಲಾಖೆ, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಹಾಗೂ ಗ್ರಾಪಂ ಅಧಿಕಾರಿಗಳು ನಿಗಾ ವಹಿಸಬೇಕು. ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ದಂಡ ವಿಧಿಸಬೇಕು ಎಂದು ಹೇಳಿದರು.







