ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಸಹಾಯಕ: ಡಿಸಿ ಡಾ.ರಾಜೇಂದ್ರ

ಮಂಗಳೂರು, ಮಾ.15: ಪೊಲೀಸರು ದಿನಪೂರ್ತಿ ಕರ್ತವ್ಯ ನಿರ್ವಹಿಸುವಾಗ ದೈಹಿಕ ಹಾಗೂ ಮಾನಸಿಕವಾಗಿ ಒತ್ತಡಕ್ಕೊಳಗಾಗುತ್ತಾರೆ. ಇವುಗಳಿಂದ ಹೊರಬರಲು ವ್ಯಾಯಾಮ ಹಾಗೂ ಕ್ರೀಡೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಿನದ 24 ಗಂಟೆಯ ಕರ್ತವ್ಯ ನಿರ್ವಹಿಸುವ ಪೊಲೀಸರು ದೈಹಿಕ ಹಾಗೂ ಮಾನಸಿಕವಾಗಿ ಒತ್ತಡಕ್ಕೊಳಗಾಗುವುದು ಸಾಮಾನ್ಯ. ಇದರಿಂದ ಹೊರಬರಲು ದೈಹಿಕ ವ್ಯಾಯಾಮದ ಜೊತೆಗೆ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೇಹ ಮತ್ತು ಮನಸ್ಸು ಎರಡನ್ನು ಸದೃಢವಾಗಿಟ್ಟುಕೊಳ್ಳುವುದರ ಜೊತೆಗೆ ಮನೋಲ್ಲಾಸ ಹೊಂದಿ ಕರ್ತವ್ಯದಲ್ಲಿ ಹೆಚ್ಚಿನ ಆಸಕ್ತಿ ತೋರಲು ಅನುಕೂಲವಾಗುತ್ತದೆ ಎಂದರು.
ಕೊರೋನ ಸೋಂಕು ತಡೆಗಟ್ಟಲು ದೇಶವ್ಯಾಪ್ತಿ ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ ಪ್ರಾಣದ ಹಂಗನ್ನು ತೊರೆದು ಪೊಲೀಸರೇ ಮುಂಚೂಣಿಯಲ್ಲಿ ನಿಂತು ಸೋಂಕು ತಡೆಗಟ್ಟಲು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದು ಅಭಿನಂದನೀಯ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ ಲಕ್ಷ್ಮೀ ಪ್ರಸಾದ್, ಅಧಿಕಾರಿಗಳು ಹಾಗೂ ಮತ್ತಿತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.





