"ಕುರ್‌ಆನಿನ 26 ಸೂಕ್ತಗಳನ್ನು ತೆಗೆದುಹಾಕಬೇಕು" ಎಂದ ವಸೀಮ್ ರಿಝ್ವಿಗೆ ನೋಟಿಸ್ ನೀಡಿದ ಅಲ್ಪಸಂಖ್ಯಾತ ಆಯೋಗ
ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ

ನವದೆಹಲಿ: ಹಿಂಸಾಚಾರವನ್ನು ಉತ್ತೇಜಿಸುತ್ತದೆಂಬ ಕಾರಣ ನೀಡಿ, ಮುಸ್ಲಿಮರ ಪವಿತ್ರ ಗ್ರಂಥ ಕುರ್ ಆನ್‌ನ ಕೆಲವು ವಚನಗಳನ್ನು ತೆಗೆದುಹಾಕುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ (ಎನ್‌ಸಿಎಂ) ಸೋಮವಾರ ನೋಟಿಸ್ ನೀಡಿದೆ.
"ನೀವು ನೀಡಿದ ಹೇಳಿಕೆಯು ದೇಶದ ಕೋಮು ಸೌಹಾರ್ದತೆಗೆ ಭಂಗ ತರುವ ಪಿತೂರಿಯಾಗಿದೆ ಎಂದು ಆಯೋಗವು ಅಭಿಪ್ರಾಯಪಟ್ಟಿದೆ" ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಆಯೋಗವು ರಿಝ್ವಿಯನ್ನು ತನ್ನ ಅಭಿಪ್ರಾಯಗಳನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಬೇಷರತ್ತಾಗಿ ಕ್ಷಮೆಯಾಚಿಸುವಂತೆ ಕೋರಿದ್ದು, ಅದು ವಿಫಲವಾದರೆ ವಿಚಾರಣೆ ನಡೆಸುವುದು ಮಾತ್ರವಲ್ಲದೇ ರಿಝ್ವಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಿರ್ದೇಶಕರನ್ನು ನಿರ್ದೇಶಿಸುತ್ತದೆ ಎಂದು ವರದಿ ತಿಳಿಸಿದೆ.
ಸುಪ್ರೀಂ ಕೋರ್ಟ್ ಗೆ ರಿಝ್ವಿ ಇತ್ತೀಚೆಗೆ ನೀಡೆದ ಪಿಐಎಲ್‌ನಲ್ಲಿ, ಭಯೋತ್ಪಾದಕರು ಈ ಕುರ್ ಆನ್ ಸೂಕ್ತಗಳನ್ನು “ಜಿಹಾದ್ ಉತ್ತೇಜಿಸಲು” ಬಳಸಿದ್ದಾರೆಂದು ಆರೋಪಿಸಿ, ಕುರ್‌ಆನ್‌ನಿಂದ 26 ಸೂಕ್ತಗಳನ್ನು ತೆಗೆದುಹಾಕಬೇಕೆಂದು ರಿಝ್ವಿ ಉಲ್ಲೇಖಿಸಿದ್ದರು.
ರಿಜ್ವಿಗೆ ನೀಡಿದ ನೋಟಿಸ್‌ನಲ್ಲಿ, ಆಯೋಗವು ಅವರ ಹೇಳಿಕೆಯು "ಪ್ರಚೋದನಕಾರಿ ಮತ್ತು ಜಾತ್ಯತೀತ ರಾಷ್ಟ್ರದ ಕೋಮು ಸೌಹಾರ್ದತೆಯ ಸಮತೋಲನವನ್ನು ಭಂಗಗೊಳಿಸುತ್ತದೆ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿದೆ" ಎಂದು ಹೇಳಿದೆ.
ರಿಜ್ವಿಯನ್ನು ಬಂಧಿಸುವಂತೆ ಒತ್ತಾಯಿಸಿ ಲಕ್ನೋ ಮತ್ತು ಹೈದರಾಬಾದ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆದ ಒಂದು ದಿನದ ನಂತರ ಆಯೋಗವು ಈ ಸೂಚನೆ ಹೊರಡಿಸಿದೆ.
ಅಲ್ಪಸಂಖ್ಯಾತರ ಸಮಿತಿಯು ನಾಲ್ಕು ಜನರ ದೂರಿನ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರೆ, ರಿಜ್ವಿ ವಿರುದ್ಧ ನೂರಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ಆಯೋಗ ತಿಳಿಸಿದೆ.
"ನಾಲ್ಕು ಜನರ ದೂರಿನ ಮೇರೆಗೆ ನಮ್ಮ ನೋಟಿಸ್ ಬಂದರೂ, ಕಳೆದ ಕೆಲವು ದಿನಗಳಲ್ಲಿ ರಿಜ್ವಿ ವಿರುದ್ಧ ಕನಿಷ್ಠ 150 ದೂರುಗಳನ್ನು ನಾವು ಸ್ವೀಕರಿಸಿದ್ದೇವೆ. ಅವರು ದೇಶದಾದ್ಯಂತ ಇರುವ ಮುಸ್ಲಿಮರ ಭಾವನೆಗಳನ್ನು ನೋಯಿಸಿದ್ದಾರೆ ಎಂದು ಎನ್‌ಸಿಎಂ ಅಧ್ಯಕ್ಷ ಅತೀಫ್ ರಶೀದ್ ಹೇಳಿದ್ದಾರೆ.
ಈ ಹಿಂದೆ ಅವರು ಮದ್ರಸಾಗಳಲ್ಲಿ ಭಯೋತ್ಪಾದನೆ ಕಲಿಸಲಾಗುತ್ತಿರುವುದರಿಂದ ಮದ್ರಸಾ ನಿಷೇಧಿಸಬೇಕು ಎಂಬ ಹೇಳಿಕೆಯನ್ನೂ ನೀಡಿದ್ದರು.







