ಇಂಧನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವವಿಲ್ಲ: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ,ಮಾ.15: ಇಂಧನ ಬೆಲೆಗಳು ಸಾರ್ವಕಾಲಿಕ ದಾಖಲೆಯನ್ನು ತಲುಪಿರುವ ನಡುವೆಯೇ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ಕಚ್ಚಾ ತೈಲ,ಪೆಟ್ರೋಲ್,ಡೀಸಿಲ್,ವಿಮಾನ ಇಂಧನ ಮತ್ತು ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವ ಯಾವುದೇ ಪ್ರಸ್ತಾವವಿಲ್ಲ ಎಂದು ಸೋಮವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದರು.
ಕಾನೂನಿನಂತೆ ಕಚ್ಚಾ ಪೆಟ್ರೋಲಿಯಂ,ಹೈಸ್ಪೀಡ್ ಡೀಸಿಲ್,ಪೆಟ್ರೋಲ್,ನೈಸರ್ಗಿಕ ಇಂಧನ ಮತ್ತು ವಿಮಾನ ಇಂಧನಗಳ ಮೇಲೆ ಜಿಎಸ್‌ಟಿಯನ್ನು ವಿಧಿಸಲಾಗುವ ದಿನಾಂಕವನ್ನು ಜಿಎಸ್‌ಟಿ ಮಂಡಳಿಯು ಶಿಫಾರಸು ಮಾಡಬೇಕಾಗುತ್ತದೆ ಎಂದರು.
2017,ಜು.1ರಂದು ಜಿಎಸ್‌ಟಿಯನ್ನು ಜಾರಿಗೊಳಿಸಿದಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆದಾಯಗಳು ಪೆಟ್ರೋಲಿಯಂ ಕ್ಷೇತ್ರವನ್ನು ಅವಲಂಬಿಸಿರುವುದನ್ನು ಪರಿಗಣಿಸಿ ಈ ಇಂಧನಗಳನ್ನು ಜಿಎಸ್‌ಟಿ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಲಾಗಿತ್ತು. ಇದು ಕೇಂದ್ರ ಸರಕಾರವು ಇಂಧನಗಳ ಮೇಲೆ ಅಬಕಾರಿ ಶುಲ್ಕವನ್ನು ಮತ್ತು ರಾಜ್ಯ ಸರಕಾರಗಳು ವ್ಯಾಟ್ ಹೇರಿಕೆಯನ್ನು ಮುಂದುವರಿಸಲು ಅವಕಾಶ ಕಲ್ಪಿಸಿದೆ. ತೆರಿಗೆಗಳು ಇಳಿದಿಲ್ಲವಾದರೆ,ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳು ಸಾರ್ವಕಾಲಿಕ ಎತ್ತರವನ್ನು ತಲುಪಿರುವ ಹಿನ್ನೆಲೆಯಲ್ಲಿ ಅವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯ ಕೇಳಿಬಂದಿತ್ತು.







