ಆಕ್ಸ್‌ಫರ್ಡ್‌ನ ಭಾರತೀಯ ವಿದ್ಯಾರ್ಥಿನಿಗೆ ವರ್ಣಭೇದ ವಿವಾದ: ಬ್ರಿಟನ್‌ಗೆ ಕಟು ಸಂದೇಶ ನೀಡಿದ ಭಾರತ

ಹೊಸದಿಲ್ಲಿ,ಮಾ.15: ವರ್ಣಭೇದ ನೀತಿಯ ಬಗ್ಗೆ ನಾವು ಸದಾ ಜಾಗೃತರಾಗಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಸೋಮವಾರ ಸಂಸತ್ತಿನಲ್ಲಿ ಘೋಷಿಸಿದರು. ಕರ್ನಾಟಕದ ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿ ಸಾವಂತ್ (22) ಅವರನ್ನು ಕಳೆದ ಫೆಬ್ರವರಿಯಲ್ಲಿ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದ ಬಲವಂತದಿಂದ ಕೆಳಗಿಳಿಸಿರುವ ಬಗ್ಗೆ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸದನದಲ್ಲಿ ಪ್ರಸ್ತಾಪಿಸಿದಾಗ ಜೈಶಂಕರ್ ಈ ಪ್ರತಿಕ್ರಿಯೆಯನ್ನು ನೀಡಿದರು.
‘ಮಹಾತ್ಮಾ ಗಾಂಧಿಯವರ ನೆಲದವರಾಗಿ ನಾವೆಂದೂ ವರ್ಣಭೇದ ನೀತಿಯ ಬಗ್ಗೆ ಕುರುಡುತನವನ್ನು ಪ್ರದರ್ಶಿಸುವುದಿಲ್ಲ,ಅದೂ ಭಾರತೀಯ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿರುವ ಬ್ರಿಟನ್‌ನಲ್ಲಿ ಇಂತಹ ಘಟನೆಯನ್ನು ನಾವು ಸಹಿಸಲು ಸಾಧ್ಯವೇ ಇಲ್ಲ. ಬ್ರಿಟನ್ ಜೊತೆ ನಾವು ಉತ್ತಮ ಸಂಬಂಧಗಳನ್ನು ಹೊಂದಿದ್ದೇವೆ ಮತ್ತು ಅಗತ್ಯವಾದಾಗ ಇಂತಹ ವಿಷಯಗಳನ್ನು ಅದರ ಜೊತೆ ಕೈಗೆತ್ತಿಕೊಳ್ಳುತ್ತೇವೆ ’ ಎಂದ ಜೈಶಂಕರ್,ಭಾರತವು ಇಂತಹ ಎಲ್ಲ ಪ್ರಕರಣಗಳು ಮತ್ತು ಅವುಗಳಲ್ಲಿ ಬೆಳವಣಿಗೆಗಳ ಮೇಲೆ ನಿಕಟ ನಿಗಾಯಿರಿಸಿದೆ. ವರ್ಣಭೇದ ಮತ್ತು ಅಸಹಿಷ್ಣುತೆಯ ಇತರ ರೂಪಗಳ ವಿರುದ್ಧ ನಾವು ಯಾವಾಗಲೂ ಹೋರಾಡುತ್ತೇವೆ ಎಂದು ಹೇಳಿದರು.
ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸಾಮಂತ್ ಅವರ ಕೆಲವೊಂದು ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಯಹೂದಿ ವಿರೋಧಿ ಮತ್ತು ಜನಾಂಗೀಯವಾದಿ ಯಾಗಿದ್ದವು ಎಂಬ ಆರೋಪಗಳು ಕೇಳಿ ಬಂದಾಗ ಆಯ್ಕೆಯಾದ ಕೇವಲ ಐದೇ ದಿನಗಳಲ್ಲಿ ಹುದ್ದೆಗೆ ರಾಜೀನಾಮೆ ನೀಡುವಂತಾಗಿತ್ತು.
ಅನುದ್ದಿಷ್ಟವಾಗಿ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಸಾಮಂತ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದರೂ ಅವರು ರಾಜೀನಾಮೆಯನ್ನು ಸಲ್ಲಿಸುವಂತೆ ಮಾಡಲಾಗಿತ್ತು.
ಸಾಮಂತ ರಾಜೀನಾಮೆ ನೀಡುವಂತೆ ಅವರ ವಿರುದ್ಧ ಸೈಬರ್ ದಾಳಿಗಳನ್ನು ನಡೆಸಲಾಗಿತ್ತು ಮತ್ತು ಅವರ ಹೆತ್ತವರ ಹಿಂದು ಧಾರ್ಮಿಕ ನಂಬಿಕೆಗಳ ಮೇಲೆ ಬಹಿರಂಗ ದಾಳಿಯನ್ನು ನಡೆಸಲಾಗಿತ್ತು ಎಂದು ಉಪಾಧ್ಯಾಯ ಹೇಳಿದರು.







