ಪತ್ನಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗದೆ ಆಕೆಯನ್ನು ಹತ್ಯೆಗೈದ ಪತಿ

ಸಾಂದರ್ಭಿಕ ಚಿತ್ರ
ಮುಂಬೈ, ಮಾ. 15: ಪತ್ನಿಯ ಅನಾರೋಗ್ಯ ದಿಂದ ಬೇಸತ್ತು ಹಾಗೂ ವೈದ್ಯಕೀಯ ಚಿಕಿತ್ಸೆ ನೀಡಲು ಸಾಧ್ಯವಾಗದೆ 45 ವರ್ಷದ ವ್ಯಕ್ತಿ ಆಕೆಯನ್ನು ಕೊಲೆಗೈದ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮುಂಬೈಯಿಂದ ಸುಮಾರು 500 ಕಿ.ಮೀ. ದೂರದಲ್ಲಿರುವ ಮುದ್ಗಲ್ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಈ ವ್ಯಕ್ತಿ ಮೆದುಳಿನ ಗಡ್ಡೆಯಿಂದ ನರಳುತ್ತಿದ್ದ ಪತ್ನಿಯನ್ನು ಹರಿತವಾದ ಆಯುಧದಿಂದ ಇರಿದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅನಂತರ ಆರೋಪಿ ಮನೆಯಿಂದ ಹೊರಗೆ ಬಂದು ರಕ್ತದಿಂದ ತೊಯ್ದ ಬಟ್ಟೆಗಳನ್ನು ಮನೆಯ ಸಮೀಪ ಎಸೆದಿದ್ದಾನೆ.
ಈ ಬಗ್ಗೆ ಕೆಲವು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಟ್ಟೆಯನ್ನು ವಶಕ್ಕೆ ತೆಗೆದುಕೊಂಡರು ಹಾಗೂ ಆರೋಪಿಯನ್ನು ಬಂಧಿಸಿದರು. ‘‘ಪತ್ನಿಯ ಅನಾರೋಗ್ಯ ಹಾಗೂ ವೈದ್ಯಕೀಯ ಚಿಕಿತ್ಸೆಯಿಂದ ಖಿನ್ನನಾಗಿ ಆಕೆಯನ್ನು ಹತ್ಯೆಗೈದೆ’’ ಎಂದು ಆರೋಪಿ ಹೇಳಿದ್ದಾನೆ ಎಂದು ಪಥಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಸಂತ್ ಚೌಹಾಣ್ ಹೇಳಿದ್ದಾರೆ.





