ಕೇರಳ ಕಾಂಗ್ರೆಸ್ (ಎಂ)ಗೆ ‘ಎರಡು ಎಲೆಗಳ’ ಚಿಹ್ನೆ: ತೀರ್ಪು ಪ್ರಶ್ನಿಸಿ ಸಲ್ಲಿಸಿದ ಮನವಿ ತಿರಸ್ಕರಿಸದ ಸುಪ್ರೀಂ ಕೋರ್ಟ್

ತಿರುವನಂತಪುರ, ಮಾ. 15: ಜೋಸ್ ಕೆ. ಮಣಿ ಬಣವನ್ನು ಅಧಿಕೃತ ಕೇರಳ ಕಾಂಗ್ರೆಸ್ (ಎಂ) ಎಂದು ಪರಿಗಣಿಸಿರುವ ಹಾಗೂ ಅದಕ್ಕೆ ಪಕ್ಷದ ಚಿಹ್ನೆಯನ್ನು ಮಂಜೂರು ಮಾಡಿರುವ ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಕೇರಳ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಜೆ. ಜೋಸೆಫ್ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ವಿ. ರಾಮಸುಬ್ರಹ್ಮಣೀಯನ್ ಅವರನ್ನು ಒಳಗೊಂಡ ನ್ಯಾಯ ಪೀಠ, ಅಧಿಕೃತ ಚುನಾವಣಾ ಚಿಹ್ನೆ ‘ಎರಡು ಎಲೆಗಳು’ ಅನ್ನು ಮಂಜೂರು ಮಾಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಎತ್ತಿ ಹಿಡಿದು ಕೇರಳ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ಜೋಸೆಫ್ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದೆ.
ಮಣಿ ಅವರ ಬಣ ನಿಜವಾದ ಕೇರಳ ಕಾಂಗ್ರೆಸ್ (ಎಂ) ಪಕ್ಷ ಎಂಬುದನ್ನು ಚುನಾವಣಾ ಆಯೋಗ ಎತ್ತಿ ಹಿಡಿಯಲು ಯಾವುದೇ ದಾಖಲೆಗಳು ಇಲ್ಲ ಎಂದು ಜೋಸೆಫ್ ಅವರ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ಪ್ರತಿಪಾದಿಸಿದರು. ಅದರೆ, ಹೈಕೋರ್ಟ್‌ನ ತೀರ್ಪಿನಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಪೀಠ ಹೇಳಿತು. ಕೇರಳ ಕಾಂಗ್ರೆಸ್‌ನ ಅಧ್ಯಕ್ಷ ಕೆ.ಎಂ. ಮಣಿ ಅವರು 2019ರಂದು ನಿಧನರಾದ ಬಳಿಕ ಪಕ್ಷದ ಕಾರ್ಯಾಧ್ಯಕ್ಷ ಜೋಸೆಫ್ ಹಾಗೂ ಉಪಾಧ್ಯಕ್ಷ ಜೋಸ್ ನಡುವೆ ಪಕ್ಷದಲ್ಲಿ ವಿವಾದ ಹುಟ್ಟಿಕೊಂಡಿತ್ತು.







