ಕೋವಿಡ್-19:ದೇಶದಲ್ಲಿ ಕಳೆದ ಐದು ದಿನಗಳಿಂದಲೂ ಹೆಚ್ಚುತ್ತಲೇ ಇರುವ ಹೊಸ ಪ್ರಕರಣಗಳ ಸಂಖ್ಯೆ

ಹೊಸದಿಲ್ಲಿ,ಮಾ.15: ದೇಶದಲ್ಲಿ ಹೊಸ ಕೊರೋನವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಐದನೇ ದಿನವಾದ ಸೋಮವಾರವೂ ಮುಂದುವರಿದಿದೆ. 26,291 ಹೊಸ ಪ್ರಕರಣಗಳು ವರದಿಯಾಗಿದ್ದು,ಇದು ಕಳೆದ 85 ದಿನಗಳಲ್ಲಿ ಒಂದು ದಿನದ ಗರಿಷ್ಠ ಪ್ರಕರಣಗಳ ಸಂಖ್ಯೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,13,85,339ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆಯು ತಿಳಿಸಿದೆ.
ಸೋಮವಾರ ಇನ್ನೂ 118 ಜನರ ಸಾವುಗಳು ವರದಿಯಾಗುವುದರೊಂದಿಗೆ ಈವರೆಗೆ ಕೋವಿಡ್-19ರಿಂದ ಮೃತರ ಸಂಖ್ಯೆ 1,58,725ಕ್ಕೇರಿದೆ.
ದೇಶದಲ್ಲೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 2,19,262ಕ್ಕೇರಿದ್ದು,ಇದು ಒಟ್ಟು ಪ್ರಕರಣಗಳ ಶೇ,1.93ರಷ್ಟಾಗಿದೆ. ಇದೇ ವೇಳೆ ಚೇತರಿಕೆ ದರ ಶೇ.96.68ಕ್ಕೆ ಕುಸಿದಿದೆ ಎಂದು ಹೇಳಿಕೆಯು ತಿಳಿಸಿದೆ.
ಕಳೆದ ವರ್ಷದ ಡಿ.20ರಂದು 24 ಗಂಟೆಗಳ ಅವಧಿಯಲ್ಲಿ 26,624 ಹೊಸ ಪ್ರಕರಣಗಳು ವರದಿಯಾಗಿದ್ದವು.
ರೋಗದಿಂದ ಚೇತರಿಸಿಕೊಂಡಿರುವವರ ಸಂಖ್ಯೆ 1,10,07,352ಕ್ಕೇರಿದ್ದರೆ,ಸಾವಿನ ದರ ಶೇ.1.39ರಷ್ಟಿದೆ.
ಮಾ.14ರವರೆಗೆ ದೇಶದಲ್ಲಿ 22,74,07,413 ಸ್ಯಾಂಪಲ್‌ಗಳನ್ನು ಕೋವಿಡ್-19 ಪರೀಕ್ಷೆಗೊಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ತಿಳಿಸಿದೆ.







