ಮಂಗಳೂರು ಪೊಲೀಸರಿಂದಲೇ ಠಾಣೆಯಲ್ಲಿ ಹಲ್ಲೆ; ಸಿಎಫ್‌ಐ ಕಾರ್ಯಕರ್ತರ ಆರೋಪ

ಮಂಗಳೂರು, ಮಾ.15: ಗಾಂಜಾ ವ್ಯಸನಿಗಳಿಂದ ಹಲ್ಲೆಗೊಳಗಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರನ್ನು ಉಳ್ಳಾಲ ಪೊಲೀಸರು ಠಾಣೆಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎಂದು ಸಿಎಫ್‌ಐ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ‘ವಾರ್ತಾಭಾರತಿ’ ಜತೆ ಮಾತನಾಡಿದ ಗಾಯಾಳು ಕಾರ್ಯಕರ್ತರಾದ ಬದ್ರ ಮುನೀರ್, ಇನಾಯತ್, ‘ವಿದ್ಯಾರ್ಥಿಗಳು ಶಾಲಾ-ಕಾಲೇಜಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಡ್ರಾಪೌಟ್ ಆಗುತ್ತಿದ್ದಾರೆ. ಇದನ್ನು ಮನಗಂಡ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಈ ಬಗ್ಗೆ ‘ಝೀರೋ ಡ್ರಾಪೌಟ್’ ಅಭಿಯಾನ ಹಮ್ಮಿಕೊಂಡಿತ್ತು. ಈ ಕುರಿತ ಜಾಗೃತಿ ಸಭೆಯ ಬಳಿಕ ಮಂಗಳೂರಿನತ್ತ ಹೊರಟಿದ್ದೆವು. ಆಗ ಮಂಗಳೂರಿನಿಂದ ಉಳ್ಳಾಲ ಕಡೆಗೆ ಬರುತ್ತಿದ್ದ ಬೈಕ್‌ನ ಸವಾರನು ನಶೆಯಲ್ಲಿದ್ದು, ವೀಲಿಂಗ್ ಮಾಡುತ್ತಿದ್ದರು. ಸಾರ್ವಜನಿಕ ರಸ್ತೆಯಲ್ಲಿ ಹೀಗೆಲ್ಲ ವರ್ತಿಸುವುದು ಸರಿಯಲ್ಲ ಎಂದಿದ್ದಕ್ಕೆ ನಮ್ಮ ಮೇಲೆಯೇ ಹಲ್ಲೆಗೈದರು" ಎಂದು ಆರೋಪಿಸಿದರು.
ಈ ಸಂದರ್ಭ ಆರೋಪಿಗಳ ಪೈಕಿ ಹಲವರು ಸ್ಥಳಕ್ಕೆ ಧಾವಿಸಿದರು. ಇದೇ ವೇಳೆ ಪೊಲೀಸರು ಕೂಡ ಸ್ಥಳಕ್ಕಾಗಮಿಸಿ, ನಮ್ಮನ್ನು ಠಾಣೆಗೆ ಕರೆದೊಯ್ದರು. ಗಾಂಜಾ ವ್ಯಸನಿಗಳನ್ನು ವಿಚಾರಿಸಿಕೊಳ್ಳದ ಪೊಲೀಸರು, ಅಮಾಯಕರಾದ ನಮಗೆ ಹಲ್ಲೆಗೈದಿದ್ದಾರೆ. ಮರ್ಮಾಂಗ, ದೇಹದ ವಿವಿಧೆಡೆ ಹೊಡೆದಿದ್ದಾರೆ. ನೀವು ಪಾಕಿಸ್ತಾನಿಗಳು, ಭಯೋತ್ಪಾದಕರು ಎಂದು ಪೊಲೀಸರು ನಿಂದಿಸಿದ್ದಾರೆ’ ಎಂದು ಆರೋಪಿಸಿದರು.
ದೂರು-ಪ್ರತಿದೂರು ದಾಖಲು: ಕಲ್ಲಾಪು ಸಮೀಪ ದ್ವಿಚಕ್ರ ವಾಹನ ಸವಾರರ ನಡುವೆ ಮಾರಾಮಾರಿ ನಡೆದಿದೆ ಎಂದು ಆರೋಪಿಸಲಾಗಿದ್ದು, ಇತ್ತಂಡಗಳು ಉಳ್ಳಾಲ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿವೆ.
ಪೊಲೀಸರು ಪ್ರಮಾದ ಎಸಗಿದ್ದರೆ ತನಿಖೆ: ಕಮಿಷನರ್
ಉಳ್ಳಾಲ ಠಾಣಾ ವ್ಯಾಪ್ತಿಯ ಕಲ್ಲಾಪು ಸಮೀಪ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದ್ದು, ದೂರು-ಪ್ರತಿದೂರು ದಾಖಲಿಸಲಾಗಿದೆ. ಕೆಲವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಬಂಧನಕ್ಕೊಳಗಾದವರಲ್ಲಿ ಕೆಲವರು ಜಾಗೃತಿ ಅಭಿಯಾನದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಕೇವಲ ವಿಚಾರಣೆಗೆಂದು ಅವರನ್ನು ಠಾಣೆಗೆ ಕರೆದೊಯ್ಯಲಾಗಿತ್ತು. ಗಾಯಾಳುಗಳು ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾದುದು. ಪೊಲೀಸರ ಕಡೆಯಿಂದ ಏನಾದರೂ ಪ್ರಮಾದ ಸಂಭವಿಸಿದ್ದರೆ ತನಿಖೆ ನಡೆಸಲಾಗುವುದು. ಈ ಬಗ್ಗೆ ದಕ್ಷಿಣ ಉಪವಿಭಾಗದ ಎಸಿಪಿಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.







