ಬಿಜೆಪಿ ಎಸ್ಸಿ ಮೋರ್ಚಾದಿಂದ ಹಬ್ಬದ ರೀತಿ ಅಂಬೇಡ್ಕರ್ ಜಯಂತಿ ಆಚರಣೆ: ಚಲವಾದಿ ನಾರಾಯಣಸ್ವಾಮಿ
ಉಡುಪಿ, ಮಾ. 15: ಎ.14ರ ಅಂಬೇಡ್ಕರ್ ಜನ್ಮದಿನವನ್ನು ಬಿಜೆಪಿ ಎಸ್‌ಸಿ ಮೋರ್ಚಾ ಈ ಬಾರಿ ಹಬ್ಬದ ರೀತಿಯಲ್ಲಿ ಆಚರಿಸಲಿದೆ. ರಾಜ್ಯದ 310 ಮಂಡಲಗಳಲ್ಲಿ ಅಂಬೇಡ್ಕರ್ ಜಯಂತಿ ದಿನ ಅಂಬೇಡ್ಕರ್ ಅವರ ಭಾವಚಿತ್ರ, ಬಿಜೆಪಿ ಧ್ವಜ ಸಹಿತ ಎರಡು ಕಿ.ಮೀ. ದೂರ ಪಾದಯಾತ್ರೆ ಹಾಗೂ ಅವರ ಪುತ್ಥಳಿಗಳಿಗೆ ಮಾಲಾರ್ಪಣೆ ನಡೆಯಲಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ.
ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಸಮಾಜ ಕಲ್ಯಾಣ ಇಲಾಖೆ ಪರಿವರ್ತನ ತಿಂಗಳು ಎಂಬ ಯೋಜನೆಯನ್ನು ಮಾ. 14ರಿಂದ ಆರಂಭಿಸಿದೆ ಎಂದು ಅವರು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪರಿಶಿಷ್ಟ ಜಾತಿಗೆ ಶೇ. 15, ಪರಿಶಿಷ್ಟ ಪಂಗಡಕ್ಕೆ ಶೇ.3ರಷ್ಟು ಮೀಸಲಾತಿ ಇದೆ. ನಮಗೆ ಇದರಲ್ಲಿ ತೃಪ್ತಿ ಇದೆ. ಪರಿಶಿಷ್ಟರಿಗೆ ಇರುವ ಮೀಸಲಾತಿ ಸಂವಿಧಾನಬದ್ಧ, ಈಗ ಹೋರಾಟ ಮಾಡಿ ಪಡೆಯುವುದು ಶಾಸನಬದ್ಧ. ಇವೆರಡಕ್ಕೂ ವ್ಯತ್ಯಾಸವಿದೆ. ಈಗ ಯಾವ ಜಾತಿಯೂ ಮೀಸಲಾತಿಯಿಂದ ವಂಚಿತವಾಗಿಲ್ಲ. ಎಲ್ಲಾ ಜಾತಿವರ್ಗಗಳಿಗೆ ಮೀಸಲಾತಿ ಸಿಕ್ಕ ಮೇಲೆ ಆ ಮೀಸಲಾತಿಯನ್ನು ಬಿಟ್ಟು ಬೇರೆ ಮೀಸಲಾತಿ ಬೇಕು ಎಂದು ಹೋರಾಟ ನಡೆಸುತಿದ್ದಾರೆ ಎಂದರು.
ಕಾಂಗ್ರೆಸ್ ಹಿಂದಿನಿಂದಲೂ ದಲಿತರ ದಾರಿ ತಪ್ಪಿಸುವ ಕೆಲಸ ಮಾಡಿಕೊಂಡು ಬಂದಿತ್ತು. ದಲಿತರನ್ನು ಓಟ್ ಬ್ಯಾಂಕ್ ಎಂದು ಪರಿಗಣಿಸಿದ್ದ ಕಾಂಗ್ರೆಸ್ ಮುಸ್ಲಿಮರನ್ನೂ ಹೀಗೆಯೇ ಭಾವಿಸಿತ್ತು. ಬಿಜೆಪಿ ದಲಿತ ವಿರೋಧಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ, ಮೀಸಲಾತಿ ರದ್ದುಪಡಿಸುತ್ತಾರೆಂದೆಲ್ಲ ಕಾಂಗ್ರೆಸ್ ಸುಳ್ಳು ಹೇಳುತ್ತಿತ್ತು. ಈಗ ದಲಿತರಿಗೂ ಕಾಂಗ್ರೆಸ್ ತಂತ್ರ ಗೊತ್ತಾಗಿದೆ ಎಂದು ಛಲವಾದಿ ನುಡಿದರು.
ನಾರಾಯಣಸ್ವಾಮಿ ಉಡುಪಿ ಜಿಲ್ಲಾ ಎಸ್‌ಸಿ ಮೋರ್ಚಾದ ಕಾರ್ಯಕಾರಿಣಿಯನ್ನು ಉದ್ಘಾಟಿಸಿ, ಜಿಲ್ಲೆಯ ಗ್ರಾಪಂ ಚುನಾವಣೆಯಲ್ಲಿ ವಿಜೇತರಾದ ಎಸ್‌ಸಿ ಸದಸ್ಯರನ್ನು ಅಭಿನಂದಿಸಿದರು. ಮೋರ್ಚಾದ ರಾಜ್ಯ ಕೋಶಾಧಿಕಾರಿ ನಾಗೇಶ್ ದೇವನಹಳ್ಳಿ ಮಾತನಾಡಿದರು. ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು ಪ್ರಸ್ತಾವನೆಗೈದರು. ಜಿಲ್ಲಾ ಕಾರ್ಯದರ್ಶಿ ಸದಾನಂದ ಕೈಪುಂಜಾಲು ಸ್ವಾಗತಿಸಿ ಕೃಷ್ಣಮೂರ್ತಿ ಕುಂದಾಪುರ ಕಾರ್ಯಕ್ರಮ ನಿರ್ವಹಿಸಿದರು.
ಬಿಜೆಪಿ ಜಿಲ್ಲಾ ಪದಾಧಿಕಾರಿಗಳಾದ ರವಿ ಅಮೀನ್, ಸದಾನಂದ ಉಪ್ಪಿನಕುದ್ರು, ನಳಿನಿ ಪ್ರದೀಪ್, ಮೋರ್ಚಾದ ಪದಾಧಿಕಾರಿಗಳಾದ ದಿನೇಶ್ ಅಮ್ಟೂರ್, ಗೋಪಾಲ ಕಳೆಂಜಿ ಮೊದಲಾದವರು ಉಪಸ್ಥಿತರಿದ್ದರು.







