ಆಯುರ್ವೇದ ವೈದ್ಯರಿಂದ ಶಸ್ತ್ರಚಿಕಿತ್ಸೆ: ಕೇಂದ್ರ ಸರಕಾರದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಮಾ. 15: ಆಯುರ್ವೇದದ ನಿರ್ದಿಷ್ಟ ವಿಭಾಗಗಳ ಸ್ನಾತಕೋತ್ತರ ಪದವೀಧರ ವೈದ್ಯರು ಶಸ್ತ್ರಚಿಕಿತ್ಸೆ ತರಬೇತಿ ಪಡೆಯಲು ಅಧಿಕಾರ ನೀಡುವ ಭಾರತೀಯ ಔಷಧದ ಕೇಂದ್ರ ಮಂಡಳಿ (ಸಿಸಿಐಎಂ) ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಸಲ್ಲಿಸಿದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರದ ಪ್ರತಿಕ್ರಿಯೆ ಕೋರಿದೆ.
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ವಿ. ರಾಮಸುಬ್ರಹ್ಮಣೀಯನ್ ಅವರನ್ನು ಒಳಗೊಂಡ ನ್ಯಾಯಪೀಠ, ಮನವಿಗೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿ ಆಯುಷ್ ಸಚಿವಾಲಯ, ಸಿಸಿಐಎಂ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ನೋಟಿಸು ಜಾರಿ ಮಾಡಿದೆ.
ಸಿಸಿಐಎಂ ಮಾಡಿದ ಸ್ನಾತಕೋತ್ತರ ಆಯುರ್ವೇದ ಶಸ್ತ್ರಚಿಕಿತ್ಸೆಯ ನಿಯಮಗಳ ತಿದ್ದುಪಡಿಯನ್ನು ರದ್ದುಗೊಳಿಸುವಂತೆ ಅಥವಾ ಬದಿಗಿರಿಸುವಂತೆ ಕೋರಿ ಹಾಗೂ ಪಠ್ಯಕ್ರಮದಲ್ಲಿ ಆಧುನಿಕ ವೈದ್ಯಕೀಯವನ್ನು ಒಳಗೊಳಿಸುವ ಅಧಿಕಾರ ಮಂಡಳಿಗೆ ಇಲ್ಲ ಎಂದು ಘೋಷಿಸುವಂತೆ ಕೋರಿ ಐಎಂಎ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಭಾರತೀಯ ವೈದ್ಯಕೀಯ ಕೇಂದ್ರ ಮಂಡಳಿ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ನಿಯಮ- 2019ಕ್ಕೆ ತಿದ್ದುಪಡಿ ತಂದಿದ್ದ ಸಿಸಿಐಎಂ ಅಧಿಸೂಚನೆಯಲ್ಲಿ 39 ಸಾಮಾನ್ಯ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಪಟ್ಟಿ ಮಾಡಿತ್ತು ಹಾಗೂ ಕಣ್ಣು, ಕಿವಿ, ಮೂಗು ಹಾಗೂ ಗಂಟಲು ಸೇರಿದಂತೆ 19 ಶಸ್ತ್ರಚಿಕಿತ್ಸಾ ವಿಧಾನಗಳನ್ನು ಒಳಗೊಳಿಸಿತ್ತು.







