ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದು, ಆಪರೇಷನ್ ಬರ್ಬಾದ್ ಮಾಡುತ್ತಿದ್ದಾರೆ: ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು, ಮಾ.15: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ 2021-21ನೆ ಸಾಲಿನ ಬಜೆಟ್‍ನಲ್ಲಿ ಬಿಚ್ಚಿಡುವುದಕ್ಕಿಂತ ಬಚ್ಚಿಟ್ಟಿರುವುದೇ ಜಾಸ್ತಿ. ಈ ಬಜೆಟ್‍ನಲ್ಲಿ ವಾಸ್ತವ ಚಿತ್ರಣವನ್ನು ಸದನದಲ್ಲಿ ಇಡುವ ಪ್ರಯತ್ನ ಮಾಡಿಲ್ಲ. 33 ಇಲಾಖೆಗಳನ್ನು ಆರು ವಲಯಗಳನ್ನಾಗಿ ಮಾಡಿದ್ದೆ ತಪ್ಪು. ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದು, ಈಗ ಆಪರೇಷನ್ ಬರ್ಬಾದ್(ಸರ್ವನಾಶ) ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸೋಮವಾರ ವಿಧಾನಸಭೆಯಲ್ಲಿ 2021-22ನೆ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಬಜೆಟ್ ಪಾರದರ್ಶಕವಾಗಿಲ್ಲ. ಯಾವ ವಲಯದಲ್ಲಿನ ಯಾವ ಇಲಾಖೆಗೆ ಎಷ್ಟು ಹಂಚಿಕೆ, ಕಳೆದ ವರ್ಷ ಎಷ್ಟು ಕೊಟ್ಟಿದ್ರು, ಈ ವರ್ಷ ಜನವರಿ ವರೆಗೆ ಎಷ್ಟು ಖರ್ಚು ಮಾಡಿದ್ದಾರೆ. ಮಾರ್ಚ್ ವೇಳೆಗೆ ನಿಗದಿತ ಗುರಿ ಮುಟ್ಟಲು ಸಾಧ್ಯವೇ? ಅಥವಾ ಏನಾದರೂ ಪರಿಷ್ಕರಣೆ ಮಾಡಲಾಗಿದೆಯೇ? ಎಂಬ ಮಾಹಿತಿಯೇ ಈ ಬಜೆಟ್‍ನಲ್ಲಿ ಇಲ್ಲ. ಬಜೆಟ್‍ನ ಪಾವಿತ್ರ್ಯತೆಯೇ ಹೋಗಿದೆ ಎಂದು ಟೀಕಿಸಿದರು.
ಕೃಷಿ ಮತ್ತು ಪೂರಕ ಚಟುವಟಿಕೆಗಳು ವಲಯ-1(ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ, ಸಹಕಾರ, ಮೀನುಗಾರಿಕೆ, ರೇಷ್ಮೆ ಮತ್ತು ಪಶುಸಂಗೋಪನೆ)ಕ್ಕೆ 2020-21ನೆ ಸಾಲಿನಲ್ಲಿ 32,259 ಕೋಟಿ ರೂ. ನೀಡಲಾಗಿತ್ತು. ಈ ಬಾರಿ 31,028 ಕೋಟಿ ರೂ.(1231 ಕೋಟಿ ರೂ.ಕಡಿಮೆ). ಹಸಿರು ಶಾಲು ಹಾಕಿಕೊಂಡು ಯಡಿಯೂರಪ್ಪ ಮಂಡಿಸಿರುವ ಬಜೆಟ್‍ನಲ್ಲಿ ನೀಡಿರುವ ಅನುದಾನ ಎಂದು ಅವರು ವ್ಯಂಗ್ಯವಾಡಿದರು.
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯ-2(ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ವಸತಿ, ಕಾರ್ಮಿಕ ಇಲಾಖೆಗಳು)ಕ್ಕೆ ಕಳೆದ ಬಾರಿ 72,093 ಕೋಟಿ ರೂ. ನೀಡಲಾಗಿತ್ತು. ಈ ಬಾರಿ 62,150 ಕೋಟಿ ರೂ.ಹಂಚಿಕೆ ಮಾಡಿದ್ದಾರೆ(9943 ಕೋಟಿ ರೂ.ಕಡಿಮೆಯಾಗಿದೆ). ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ವಲಯ-3(ಮೂಲಸೌಕರ್ಯ, ಕೈಗಾರಿಕೆ, ಬಂದರು, ಗಣಿ, ಕುಡಿಯುವ ನೀರು ಪೂರೈಕೆ). ಕಳೆದ ಬಾರಿ 55,732 ಕೋಟಿ ರೂ., ಈ ಬಾರಿ 52529 ಕೋಟಿ ರೂ.ಹಂಚಿಕೆಯಾಗಿದೆ(3203 ಕೋಟಿ ರೂ.ಕಡಿಮೆ). ಇಂತಹ ಪರಿಸ್ಥಿತಿಯಲ್ಲಿ ಜಿಡಿಪಿ ಬೆಳವಣಿಗೆ ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬೆಂಗಳೂರು ಅಭಿವೃದ್ಧಿ ವಲಯ-4ಕ್ಕೆ ಕಳೆದ ಬಾರಿ 8772 ಕೋಟಿ ರೂ.ನೀಡಲಾಗಿತ್ತು. ಈ ಬಾರಿಯ ಬಜೆಟ್‍ನಲ್ಲಿ 7795 ಕೋಟಿ ರೂ.ಹಂಚಿಕೆ ಮಾಡಲಾಗಿದೆ(977 ಕೋಟಿ ರೂ.ಕಡಿಮೆ). ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಂಪನ್ಮೂಲ ವಲಯ-5 ಇದಕ್ಕೆ ಕಳೆದ ಬಾರಿ 4552 ಕೋಟಿ ರೂ.ನೀಡಲಾಗಿತ್ತು. ಈ ಬಾರಿ 2645 ಕೋಟಿ ರೂ.(1907 ಕೋಟಿ ರೂ.ಕಡಿತ) ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಆಡಳಿತ ಸುಧಾರಣೆ ವಲಯ-6 ಇದಕ್ಕೆ ಕಳೆದ ಸಾಲಿನ ಬಜೆಟ್‍ನಲ್ಲಿ 10,194 ಕೋಟಿ ರೂ.ಗಳನ್ನು ಇಡಲಾಗಿತ್ತು. ಆದರೆ, ಈ ಬಾರಿ 52,519 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಈ ಆಡಳಿತ ಸುಧಾರಣೆ ವಲಯಕ್ಕೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ. ಯಾವ ಕಾರ್ಯಕ್ರಮಕ್ಕೆ ಎಷ್ಟು ಖರ್ಚು ಮಾಡುತ್ತೇವೆ ಎಂಬುದನ್ನೆ ಉಲ್ಲೇಖಿಸಿಲ್ಲ. ಅಂಕಿ ಅಂಶಗಳನ್ನು ಕಡಿಮೆ ಮಾಡಿದ್ದರೂ ಜನ ಒಪ್ಪಿದ್ದಾರೆ ಎಂದು ಸರಕಾರ ತನ್ನ ಬೆನ್ನು ತಾನೇ ತಟ್ಟಿಕೊಂಡರೆ ನಾನೇನು ಮಾಡಲು ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿಗೆ ನಾನು ಬರೆದಿರುವ 7-8 ಪತ್ರಗಳಿಗೆ ಉತ್ತರ ಬಂದಿಲ್ಲ. ಕೋವಿಡ್ ನಿರ್ವಹಣೆ, ತೆರಿಗೆ ಸಂಗ್ರಹ, ಸಾಲ, ಕೇಂದ್ರ ಸರಕಾರದಿಂದ ಬರಬೇಕಿರುವ ಅನುದಾನ ಪಡೆಯುವುದು ಸೇರಿದಂತೆ ಅನೇಕ ಸಲಹೆಗಳನ್ನು ನೀಡಿದ್ದೇನೆ. ಆದರೆ, ನನ್ನ ಪತ್ರಗಳ ಬಗ್ಗೆ ಮುಖ್ಯಮಂತ್ರಿಯ ಸಿಬ್ಬಂದಿಗಳು ಅವರ ಗಮನಕ್ಕೆ ತಂದಿದ್ದಾರೋ, ಇಲ್ಲವೊ ಗೊತ್ತಿಲ್ಲ. ಪ್ರಧಾನಿಗೂ ಪೆಟ್ರೋಲ್, ಡಿಸೇಲ್ ಮೇಲಿನ ಸುಂಕ ಕಡಿತದ ಕುರಿತು ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದರು.
ಹಾಸ್ಟೆಲ್‍ನಲ್ಲಿರುವ ಪ್ರಿ ಮೆಟ್ರಿಕ್ ವಿದ್ಯಾರ್ಥಿಗಳಿಗೆ 400 ರೂ, ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳಿಗೆ 500 ರೂ.ಭೋಜನ ಭತ್ತೆ ನೀಡಬೇಕು. ವೀರಶೈವ ಹಾಗೂ ಒಕ್ಕಲಿಗ ಜನಾಂಗದವರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ತಲಾ 500 ಕೋಟಿ ರೂ.ಕೊಟ್ಟಿರುವುದು ಸ್ವಾಗತ. ಆದರೆ, ಉಳಿದ 12-13 ನಿಗಮ, ಮಂಡಳಿಗಳಿಗೆ ನೀಡಿರುವುದು 500 ಕೋಟಿ ರೂ. ಇದನ್ನು ಸಮರ್ಥನೆ ಮಾಡಲು ಸಾಧ್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ವಿದ್ಯಾಸಿರಿ ಯೋಜನೆ ಸ್ಥಗಿತಗೊಳಿಸಿದ್ದಾರೆ. ಬಡವರಿಗೆ ಅನ್ನ ನೀಡುವ ಯೋಜನೆ ಇಂದಿರಾ ಕ್ಯಾಂಟೀನ್ ಅನ್ನು ಗುಣಮಟ್ಟದ ನೆಪ ಹೇಳಿ ಮುಚ್ಚಿದ್ದಾರೆ. ವಿದ್ಯುತ್, ನೀರಿನ ಸಂಪರ್ಕ ಕಡಿತ ಮಾಡಿದ್ದಾರೆ. ಇಂದಿರಾ ಗಾಂಧಿ ಫೋಟೋ ಇದೆ ಎಂದು ಮುಚ್ಚುತ್ತಿದ್ದಾರೆಯೇ? ಬಡವರ ಶಾಪ ತಟ್ಟುತ್ತೆ, ಯಾವುದೆ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಮುಚ್ಚಬೇಡಿ ಎಂದು ಅವರು ಹೇಳಿದರು.
ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕಾಂಶಯುಕ್ತ ಆಹಾರ ಪೂರೈಸುವ ಮಾತೃಪೂರ್ಣ ಯೋಜನೆ ನಿಲ್ಲಿಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದಾಗ ಮಧ್ಯಪ್ರವೇಶಿಸಿ ಬಿಜೆಪಿ ಶಾಸಕಿ ರೂಪಾಲಿ ನಾಯಕ್, ಆ ಯೋಜನೆ ಸ್ಥಗಿತವಾಗಿಲ್ಲ. ವಿಪಕ್ಷ ನಾಯಕರು ಸದನಕ್ಕೆ ತಪ್ಪು ಮಾಹಿತಿ ನೀಡಬಾರದು ಎಂದರು.
ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ನಿಲ್ಲಿಸಲಾಗಿದೆ. ಒಂದು ವೇಳೆ ನಿಲ್ಲಿಸದೆ ಇದ್ದರೆ ಸ್ವಾಗತ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ರೂಪಾಲಿ ನಾಯಕ್ ತಮ್ಮ ಮಾತನ್ನು ಮುಂದುವರಿಸಿದ್ದರು. ಆಗ ಕಾಂಗ್ರೆಸ್ ಸದಸ್ಯರು ಹಾಗೂ ರೂಪಾಲಿ ನಾಯಕ್ ನಡುವೆ ಕೆಲಕಾಲ ವಾಗ್ವಾದ ನಡೆದು, ಸಂಬಂಧಪಟ್ಟ ಸಚಿವರು ಉತ್ತರಿಸಲಿ ನೀವು ಹೇಳುವುದು ಬೇಡ ಎಂದರು. ಈ ವೇಳೆ ರೂಪಾಲಿ ಬೆಂಬಲಕ್ಕೆ ಸಚಿವ ಲಿಂಬಾವಳಿ ಧಾವಿಸಿದರು.
ನಿಮ್ಮಿಬ್ಬರದ್ದು ಮಿಲಾಪ್ ಕುಸ್ತಿ
ಟೀಕೆ ಮಾಡೋದು ನನ್ನ ಹಕ್ಕು ನೀವು ಯಾಕೆ ಮಾಡುತ್ತೀರಾ ಎಂದು ಯತ್ನಾಳ್ ಹೇಳುತ್ತಿರಬಹುದು ಎಂದು ಸಿದ್ದರಾಮಯ್ಯ ಛೇಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನೀವಿಬ್ಬರೂ ಹೇಗಿದ್ದೀರಾ ಎಂದು ಗೊತ್ತು. ಬಾದಾಮಿಗೆ ಎಷ್ಟು ಹಣ ಬೇಕು ಅಷ್ಟು ಸಿಗುತ್ತೆ. ಇದೆಲ್ಲ ಮಿಲಾಪ್ ಕುಸ್ತಿ. ನೀವು ಎರಡು ಗಂಟೆ ಭಾಷಣ ಮಾಡುತ್ತೀರಾ, ಅವರು ಉತ್ತರ ಕೊಡುತ್ತಾರೆ. ನಾವು ಹಿಂದೆ ಕೂತು ಚಪ್ಪಾಳೆ ತಟ್ಟಿ ಎದ್ದು ಹೋಗುತ್ತೀವಿ. ಹಿರಿಯರು ಹೋದರೆ ತಾನೆ ನಮಗೆ ಅವಕಾಶ ಸಿಗುತ್ತೆ ಎಂದರು.
‘ಅನುಗ್ರಹ’ ಎರಡು ದಿನದಲ್ಲಿ 38 ಕೋಟಿ ರೂ.ಬಿಡುಗಡೆ: ಸಿಎಂ
ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಅಸುನೀಗುವ ಕುರಿಗಳಿಗೆ ಪರಿಹಾರ ನೀಡುವ ‘ಅನುಗ್ರಹ’ ಯೋಜನೆಯಡಿ ಬಾಕಿಯಿರುವ 38 ಕೋಟಿ ರೂ.ಗಳನ್ನು ಇನ್ನೆರಡು ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದರು. ಇದಕ್ಕೂ ಮುನ್ನ ಈ ಯೋಜನೆ ಕುರಿತು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ಏರ್ಪಟ್ಟಿತ್ತು.







