ಮುಖೇಶ್ ಅಂಬಾನಿ ಭದ್ರತೆಗೆ ಬೆದರಿಕೆ ಪ್ರಕರಣ: ಬಂಧಿತ ಮುಂಬೈ ಪೊಲೀಸ್ ಅಧಿಕಾರಿಯ ಅಮಾನತು
ಮುಂಬೈ, ಮಾ. 15: ಉದ್ಯಮ ಮುಖೇಶ್ ಅಂಬಾನಿ ಅವರ ನಿವಾಸದ ಸಮೀಪ ಸ್ಫೋಟಕ ತುಂಬಿದ ಕಾರು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎಯಿಂದ ಬಂಧಿತರಾದ ಹಿನ್ನೆಲೆಯಲ್ಲಿ ಉಪ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಝ್ ಅವರನ್ನು ಮುಂಬೈ ಪೊಲೀಸ್ ಸೋಮವಾರ ಅಮಾನತುಗೊಳಿಸಿದೆ. ‘‘ಸ್ಪೆಷಲ್ ಬ್ರಾಂಚ್‌ನ ಹೆಚ್ಚುವರಿ ಪೊಲೀಸ್ ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಉಪ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಾಝೆ ಅವರನ್ನು ಅಮಾನತಿನಲ್ಲಿ ಇರಿಸಲಾಗಿದೆ’’ ಎಂದು ಉಪ ಪೊಲೀಸ್ ಆಯುಕ್ತ ಎಸ್. ಚೈತನ್ಯಾ ತಿಳಿಸಿದ್ದಾರೆ.
ದಕ್ಷಿಣ ಮುಂಬೈಯಲ್ಲಿರುವ ಅಂಬಾನಿ ಅವರ ನಿವಾಸ ‘ಆ್ಯಂಟಿಲಾ’ದ ಸಮೀಪ ಫೆಬ್ರವರಿ 25ರಂದು 20 ಜೆಲೆಟಿನ್ ಕಡ್ಡಿಗಳನ್ನು ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾದ ಪ್ರಕರಣದ ತನಿಖೆಗೆ ಸಂಬಂಧಿಸಿ ವಾಝೆ ಅವರನ್ನು ಎನ್‌ಐಎ ಶನಿವಾರ ರಾತ್ರಿ ಬಂಧಿಸಿತ್ತು. ಕ್ರಿಮಿನಲ್‌ಗಳು ಎಂದು ಹೇಳಲಾದ 63 ಮಂದಿಯನ್ನು ಎನ್‌ಕೌಂಟರ್ ಮಾಡಿರುವ ವಾಝೆ ಅವರು ಸ್ಕಾರ್ಪಿಯೋ ಮಾಲಕ ಹಾಗೂ ಮುಂಬೈ ಮೂಲದ ಉದ್ಯಮಿ ಮನುಸುಖ್ ಹಿರೇನ್ ಅವರ ಕೊಲೆ ಪ್ರಕರಣದಲ್ಲಿ ಕೂಡ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ. ಮನುಸುಖ್ ಹಿರೇನ್ ಅವರ ಮೃತದೇಹ ಮಾರ್ಚ್ 5ರಂದು ಥಾಣೆ ಜಿಲ್ಲೆಯ ಕ್ರೀಕ್‌ನಲ್ಲಿ ಪತ್ತೆಯಾಗಿತ್ತು. ಮುಂಬೈ ನ್ಯಾಯಾಲಯ ರವಿವಾರ ವಾಝೆ ಅವರನ್ನು ಮಾರ್ಚ್ 25ರ ವರೆಗೆ ಎನ್‌ಐಎ ಕಸ್ಟಡಿಗೆ ನೀಡಿತ್ತು.







