ಮೈಮುಲ್ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ ಬಣಕ್ಕೆ ಭರ್ಜರಿ ಜಯ: ಕುಮಾರಸ್ವಾಮಿಗೆ ಮುಖಭಂಗ

ಮೈಸೂರು,ಮಾ.16: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ (ಮೈಮುಲ್) ಚುನಾವಣೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಬಣ ಭರ್ಜರಿ ಜಯ ಸಾಧಿಸಿದೆ.
ಮೈಮುಲ್ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಬಣ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್ ವರಿಷ್ಠ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಸಾ.ರಾ.ಮಹೇಶ್ ಬಣವು ಕೇವಲ 3 ಸ್ಥಾನಗಳನ್ನಷ್ಟೇ ಗಳಿಸಿ ಮುಖಭಂಗ ಅನುಭವಿಸಿದೆ. ಈ ಮೂಲಕ ಜಿ.ಟಿ ದೇವೇಗೌಡ ಅವರ ಬಣ ಮುಂದಿನ 5 ವರ್ಷದವರೆಗೆ ಮೈಮುಲ್ ಅಧಿಕಾರದ ಗದ್ದುಗೆ ಹಿಡಿಯುವುದು ಖಚಿತಗೊಂಡಿದೆ.
ಮೈಮುಲ್ ಚುನಾವಣೆಯಲ್ಲಿ ಎಚ್.ಡಿ.ರೇವಣ್ಣ ಸಂಬಂಧಿ ಎಸ್.ಕೆ.ಮಧುಚಂದ್ರ ಸೋಲು ಅನುಭವಿಸಿದ್ದಾರೆ. ಅವರು ಎಚ್.ಡಿ.ಕುಮಾರಸ್ವಾಮಿ-ಸಾ.ರಾ.ಮಹೇಶ್ ಬೆಂಬಲದೊಂದಿಗೆ ಕಣಕ್ಕಿಳಿದಿದ್ದರು. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಎಚ್.ಡಿ.ಕುಮಾರಸ್ವಾಮಿ, ನಾಲ್ಕು ದಿನ ಮೈಸೂರಿನಲ್ಲಿಯೇ ತಂಗಿ ಜಿಲ್ಲೆಯ ಹಲವು ತಾಲೂಕುಗಳಿಗೆ ಭೇಟಿ ನೀಡಿ ಅವರ ಬಣದ ಅಭ್ಯರ್ಥಿಗಳ ಪರ ಮತಯಾಚಿಸಿದ್ದರು.





