ಭಾರತದಲ್ಲಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ: ಬ್ರಿಟನ್ ಸಂಸತ್ನಲ್ಲಿ ಚರ್ಚೆ

ಫೈಲ್ ಚಿತ್ರ
ಲಂಡನ್, ಮಾ. 16: ಬ್ರಿಟನ್ ಸಂಸದರು ಸೋಮವಾರ ಹೌಸ್ ಆಫ್ ಲಾರ್ಡ್ಸ್ನಲ್ಲಿ, ಭಾರತದಲ್ಲಿರುವ ಸರಕಾರೇತರ ಸಂಘಟನೆಗಳು (ಎನ್ಜಿಒಗಳು), ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರ ಗುಂಪುಗಳು ಹೊಂದಿರುವ ಸ್ವಾತಂತ್ರದ ಬಗ್ಗೆ ಚರ್ಚೆ ನಡೆಸಿದರು. ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವಾಗ ಪ್ರಧಾನಿ ನರೇಂದ್ರ ಮೋದಿ ಜೊತೆ ಈ ವಿಷಯವನ್ನು ನೇರವಾಗಿ ಪ್ರಸ್ತಾಪಿಸುವಂತೆ ಅವರು ಪ್ರಧಾನಿ ಬೋರಿಸ್ ಜಾನ್ಸನ್ಗೆ ಕರೆ ನೀಡಿದರು.
‘ಭಾರತ: ಸ್ವಾತಂತ್ರದ ಮೇಲಿನ ನಿರ್ಬಂಧಗಳು’ ಎಂಬ ವಿಷಯದ ಕುರಿತ ಚರ್ಚೆಯನ್ನು ಬ್ರಿಟನ್ ಸಂಸತ್ನ ಮೇಲ್ಮನೆಯಲ್ಲಿ ಸಂಸದ ಲಾರ್ಡ್ ರಿಚರ್ಡ್ ಹ್ಯಾರೀಸ್ ಆರಂಭಿಸಿದರು.
ಇದಕ್ಕೆ ಸಂಪ್ರದಾಯದಂತೆ ಸರಕಾರದ ಪರವಾಗಿ ಉತ್ತರಿಸಿದ ವಿದೇಶ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್ಸಿಡಿಒ) ಸಚಿವ ಲಾರ್ಡ್ ಝ್ಯಿಕ್ ಗೋಲ್ಡ್ಸ್ಮಿತ್, ಬ್ರಿಟನ್ ಮತ್ತು ಭಾರತದ ನಡುವಿನ ನಿಕಟ ಬಾಂಧವ್ಯವನ್ನು ಪ್ರಸ್ತಾಪಿಸಿದರು. ಚಾಲ್ತಿಯಲ್ಲಿರುವ ಮಾತುಕತೆಯ ಭಾಗವಾಗಿ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಲು ಬ್ರಿಟನ್ಗೆ ಭಾರತವು ಅವಕಾಶ ನೀಡಿದೆ ಎಂದು ಹೇಳಿದರು.
‘‘ಬ್ರಿಟನ್ ಪ್ರಧಾನಿ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದು ಭಾರತ ಸರಕಾರದೊಂದಿಗೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ. ಯಾವುದೆಲ್ಲ ವಿಷಯಗಳಲ್ಲಿ ನಾವು ಕಳವಳಗಳನ್ನು ಹೊಂದಿದ್ದೇವೆಯೋ, ಅವುಗಳನ್ನು ನಮ್ಮ ಪ್ರಧಾನಿ ಭಾರತ ಸರಕಾರದೊಂದಿಗೆ ನೇರವಾಗಿ ಪ್ರಸ್ತಾಪಿಸಲಿದ್ದಾರೆ’’ ಎಂದು ಲಾರ್ಡ್ ಗೋಲ್ಡ್ಸ್ಮಿತ್ ಹೇಳಿದರು.
ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಬ್ರಿಟನ್ ಸಂಸತ್ನ ಕೆಳಮನೆ ಹೌಸ್ ಆಫ್ ಕಾಮನ್ಸ್ನ ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆದ ವಾರದ ಬಳಿಕ ಮೇಲ್ಮನೆಯಲ್ಲಿ ಈ ಚರ್ಚೆ ನಡೆದಿದೆ.
‘ಮಾನವಹಕ್ಕುಗಳ ಹೋರಾಟಗಾರರ ವಿರುದ್ಧ ಪ್ರತೀಕಾರ’
ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಇಂಡಿಯ ಕಚೇರಿಯ ಮುಚ್ಚುಗಡೆ ಮತ್ತು ಅದರ ಬ್ಯಾಂಕ್ ಖಾತೆಗಳ ಸ್ತಂಭನ, ಕಾಶ್ಮೀರದಲ್ಲಿನ ಪರಿಸ್ಥಿತಿ, ಪತ್ರಕರ್ತರನ್ನು ಜೈಲಿಗೆ ತಳ್ಳುತ್ತಿರುವ ವಿದ್ಯಮಾನ, ಅಲ್ಪಸಂಖ್ಯಾತರಲ್ಲಿ ನೆಲೆಸಿರುವ ಅಭದ್ರತೆಯ ಭಾವನೆ ಹಾಗೂ ದಲಿತ ಹಕ್ಕುಗಳ ಕಾರ್ಯಕರ್ತರು, ಎನ್ಜಿಒಗಳು ಮತ್ತು ಮಾನವಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಟ ನಡೆಸುತ್ತಿರುವವರ ವಿರುದ್ಧ ತೆಗೆದುಕೊಳ್ಳಲಾಗುತ್ತಿರುವ ಪ್ರತೀಕಾರದ ಕ್ರಮಗಳ ಬಗ್ಗೆ ಭಾರತ ಸರಕಾರದೊಂದಿಗೆ ಚರ್ಚಿಸುವಂತೆ ಹೌಸ್ ಆಫ್ ಲಾರ್ಡ್ಸ್ನಲ್ಲಿ ನಡೆದ ಚರ್ಚೆಯ ವೇಳೆ ಸಂಸದರು ಬ್ರಿಟನ್ ಸರಕಾರವನ್ನು ಒತ್ತಾಯಿಸಿದರು.
‘ಕೆಲವು ವರ್ಷಗಳಿಂದ ಸ್ವಾತಂತ್ರ್ಯದಲ್ಲಿ ವ್ಯತ್ಯಯ’
‘‘ಬ್ರಿಟನ್ನಿಂದ ಪಡೆದುಕೊಂಡ ಪ್ರಜಾಸತ್ತಾತ್ಮಕ ತತ್ವಗಳು ಮತ್ತು ಸಂಪ್ರದಾಯಗಳನ್ನು ಕೆಲವು ವರ್ಷಗಳ ಹಿಂದಿನವರೆಗೂ ಭಾರತವು ಎತ್ತಿಹಿಡಿಯುತ್ತಾ ಬಂದಿತ್ತು. ಈಗ ಹಲವಾರು ಕ್ಷೇತ್ರಗಳಲ್ಲಿನ ಪ್ರಜಾಸತ್ತಾತ್ಮಕ ಸ್ವಾತಂತ್ರಗಳನ್ನು ಭಾರತ ಸರಕಾರವು ಪುನರ್ರೂಪಿಸಿರುವುದು ಎಲ್ಲರ ಗಮನಕ್ಕೆ ಬಂದಿದೆ’’ ಎಂದು ಕನ್ಸರ್ವೇಟಿವ್ ಪಕ್ಷದ ಸಂಸದ ಲಾರ್ಡ್ ಹೊವಾರ್ಡ್ ಫ್ಲೈಟ್ ಹೇಳಿದರು.







