ಪಿಣರಾಯಿ ವಿಜಯನ್ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿರುವ ಕೊಲೆಗೈಯಲ್ಪಟ್ಟ ದಲಿತ ಬಾಲಕಿಯರ ತಾಯಿ

ತ್ರಿಶ್ಶೂರು(ಕೇರಳ),ಮಾ.16: ನಾಲ್ಕು ವರ್ಷಗಳ ಹಿಂದೆ ಕೇರಳ-ತಮಿಳುನಾಡು ಗಡಿ ಬಳಿಯ ವಲಯಾರ್ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾಗಿದ್ದ ಇಬ್ಬರು ಅಪ್ರಾಪ್ತ ವಯಸ್ಕ ದಲಿತ ಬಾಲಕಿಯರ ತಾಯಿ ಮುಂಬರುವ ಕೇರಳ ವಿಧಾನಭೆಯಲ್ಲಿ ಧರ್ಮಡಂ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.
ಚುನಾವಣೆಯಲ್ಲಿ ತನ್ನ ಸ್ಪರ್ಧೆಯು ಪ್ರಕರಣದ ಆರಂಭಿಕ ತನಿಖೆಯನ್ನು ನಡೆಸಿದ್ದ ಪೊಲೀಸ್ ಅಧಿಕಾರಿಗಳನ್ನು ರಕ್ಷಿಸುತ್ತಿರುವುದಕ್ಕಾಗಿ ಎಲ್ಡಿಎಫ್ ಸರಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆಯ ಸಂಕೇತವಾಗಿದೆ ಎಂದು ಮಹಿಳೆ ಹೇಳಿದರು.
2019ರಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದರ ವಿರುದ್ಧ ರಾಜ್ಯ ಸರಕಾರದ ಮೇಲ್ಮನವಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು ಈ ವರ್ಷದ ಜನವರಿಯಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿತ್ತು ಮತ್ತು ಪ್ರಕರಣದ ಮರು ವಿಚಾರಣೆಗೆ ಆದೇಶಿಸಿತ್ತು. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ರಾಜ್ಯ ಸರಕಾರವು ನಿರ್ಧರಿಸಿದೆ.
‘ಪ್ರತಿಭಟನಾ ಸಮಿತಿಯೊಂದಿಗೆ ಚರ್ಚಿಸಿದ ಬಳಿಕ ಧರ್ಮಡಂ ಕ್ಷೇತ್ರದಲ್ಲಿ ಪಕ್ಷೇತರಳಾಗಿ ಸ್ಪರ್ಧಿಸಲು ನಾನು ನಿರ್ಧರಿಸಿದ್ದೇನೆ. ನನ್ನ ಪುತ್ರಿಯರಿಗೆ ನ್ಯಾಯವನ್ನು ದೊರಕಿಸುವ ನನ್ನ ಪ್ರಯತ್ನದಲ್ಲಿ ನನ್ನನ್ನು ತಲೆ ಬೋಳಿಸಿ ಬೀದಿಯಲ್ಲಿ ಕುಳಿತುಕೊಳ್ಳುವಂತೆ ಬಲಾತ್ಕರಿಸಲಾಗಿತ್ತು. ಡಿವೈಎಸ್ಪಿ ಸೋಜನ್ ಮತ್ತು ಎಸ್ಐ ಚಾಕೋರಂತಹ ಪೊಲೀಸ್ ಅಧಿಕಾರಿಗಳು ಸೇವೆಯಲ್ಲಿ ಮುಂದುವರಿಯಲು ಅರ್ಹರಲ್ಲ. ಪೊಲೀಸ್ ಕ್ಯಾಪ್ ಇಲ್ಲದ ಅವರ ತಲೆಗಳನ್ನು ನೋಡಲು ನಾನು ಬಯಸಿದ್ದೇನೆ ’ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳೆ ತಿಳಿಸಿದರು.
2017,ಜ.13ರಂದು ಮಹಿಳೆಯ ಇಬ್ಬರು ಪುತ್ರಿಯರ ಪೈಕಿ 13ರ ಹರೆಯದ ಹಿರಿಯವಳ ಶವವು ಮನೆಯ ಪಕ್ಕಾಸಿನಲ್ಲಿ ನೇತಾಡುತ್ತಿದ್ದುದು ಪತ್ತೆಯಾಗಿತ್ತು. ಎರಡು ತಿಂಗಳ ಬಳಿಕ ಒಂಭತ್ತರ ಹರೆಯದ ಕಿರಿಯ ಪುತ್ರಿಯ ಶವವೂ ಅದೇ ಪಕ್ಕಾಸಿನಲ್ಲಿ ನೇತಾಡುತ್ತಿತ್ತು. ಸಾಯುವ ಮುನ್ನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿದ್ದನ್ನು ಮರಣೋತ್ತರ ಪರೀಕ್ಷೆಗಳು ದೃಢಪಡಿಸಿದ್ದವು. ಗ್ರಾಮಸ್ಥರ ಪ್ರತಿಭಟನೆಗಳ ಬಳಿಕ ಐವರನ್ನು ಪೊಲೀಸರು ಬಂಧಿಸಿದ್ದರು.







