"ಹಸಿದ ಹೊಟ್ಟೆಯಲ್ಲಿ ಕಲಿಯಲು ಸಾಧ್ಯವಿಲ್ಲ": ಶಾಲೆಗಳಲ್ಲಿ ಬಿಸಿಯೂಟ ಪುನರಾರಂಭಿಸುವಂತೆ ಹೈಕೋರ್ಟ್ ಆದೇಶ

ಬೆಂಗಳೂರು: ಅಂಗನವಾಡಿಗಳಲ್ಲಿನ ಮಕ್ಕಳಿಗೆ ಮತ್ತು ಅಂಗನವಾಡಿಗಳಿಂದ ಪೌಷ್ಠಿಕಾಂಶವನ್ನು ಪಡೆಯಲು ಅರ್ಹರಾಗಿರುವ ಇತರ ವ್ಯಕ್ತಿಗಳಿಗೆ ಬೇಯಿಸಿದ ಊಟವನ್ನು ನೀಡಲಾಗಿದೆಯೇ ಎಂಬುವುದರ ಬಗ್ಗೆ ಮಾರ್ಚ್ 30 ರೊಳಗೆ ಪ್ರತಿಕ್ರಿಯಿಸುವಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
6 ನೇ ತರಗತಿಯಿಂದ 8 ನೇ ತರಗತಿಯವರೆಗೆ ಶಾಲೆಗಳಿಗೆ ಹಾಜರಾಗುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಲಾಗಿದೆಯೇ ಮತ್ತು ಆ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬುದರ ಬಗ್ಗೆ ರಾಜ್ಯವು ಪ್ರತಿಕ್ರಿಯಿಸಬೇಕಾಗಿದೆ.
ಏಪ್ರಿಲ್ 10 ರವರೆಗೆ ಮಕ್ಕಳಿಗೆ ಪಡಿತರವನ್ನು ಒದಗಿಸುವ ನಿಬಂಧನೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದ ನಂತರ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರ ವಿಭಾಗೀಯ ಪೀಠವು ಈ ನಿರ್ದೇಶನವನ್ನು ಹೊರಡಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ನಾಯಪೀಠವು "ಸದ್ಯ ಅಂಗನವಾಡಿಗಳನ್ನು ತೆರೆಯಲಾಗಿದೆ ೩ರಿಂದ ೬ ವರ್ಷದೊಳಗಿನ ಮಕ್ಕಳು ಅಂಗನವಾಡಿಗೆ ಹಾಜರಾಗುತ್ತಿದ್ದಾರೆ. ಅವರಿಗೆ ಬೇಯಿಸಿದ ಆಹಾರವನ್ನು ನೀಡುವುದು ಜವಾಬ್ದಾರಿಯಾಗಿರುತ್ತದೆ. ಆದರೆ, ಅವರಿಗೆ ಬಿಸಿಯೂಟ ಒದಗಿಸಲಾಗಿದೆಯೇ? ಆ ವ್ಯವಸ್ಥೆ ಇದೆಯೇ ಎಂದು ತಿಳಿದಿಲ್ಲ" ಎಂದು ಹೇಳಿತು.
ಮುಂದುವರಿದು, "ಹಂತಹಂತವಾಗಿ ಶಾಲೆಗಳನ್ನು ಮತ್ತೆ ತೆರೆಯಲಾಗಿದ್ದು, 6 ರಿಂದ 10 ನೇ ತರಗತಿಯವರೆಗೆ ಮಕ್ಕಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಊಟ ನೀಡುವ ವ್ಯವಸ್ಥೆಯನ್ನು ರಾಜ್ಯವು ಹೊಂದಿದೆ. ಆದರೆ ಕೋವಿಡ್ -19 ಸಾಂಕ್ರಾಮಿಕದ ಕಾರಣದಿಂದಾಗಿ, ಶಾಲೆಗಳಿಗೆ ಹಾಜರಾಗುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸಲಾಗಿದೆಯೇ ಎಂದು ತಿಳಿದಿಲ್ಲ" ಎಂದು ನ್ಯಾಯಪೀಠ ಹೇಳಿದೆ.
ವಿಚಾರಣೆಯ ಸಮಯದಲ್ಲಿ ನ್ಯಾಯಪೀಠ ಮೌಖಿಕವಾಗಿ "ಶಿಕ್ಷಣದ ಹಕ್ಕು ಆರ್ಟಿಕಲ್ 21 ಎ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ. ಮಧ್ಯಾಹ್ನದ ಊಟವನ್ನು ಒದಗಿಸುವುದು ಕೂಡಾ ಮೂಲಭೂತ ಹಕ್ಕಾಗಿದೆ, ಏಕೆಂದರೆ ನೀವು ಖಾಲಿ ಹೊಟ್ಟೆಯಲ್ಲಿ ಅಧ್ಯಯನ ಮಾಡಲು ಮಕ್ಕಳಿಗೆ ಆದೇಶಿಸುವಂತಿಲ್ಲ. ಹಸಿದ ಹೊಟ್ಟೆಯಲ್ಲಿ ಯಾರೂ ಅಧ್ಯಯನ ಮಾಡಲು ಸಾಧ್ಯವಿಲ್ಲ" ಎಂದು ನ್ಯಾಯಪೀಠ ಹೇಳಿದೆ.







