ಆ್ಯಸ್ಟ್ರಝೆನೆಕ ಲಸಿಕೆಯ ಬಳಕೆಗೆ 21 ದೇಶಗಳ ತಾತ್ಕಾಲಿಕ ನಿಷೇಧ
ಡಬ್ಲ್ಯುಎಚ್‌ಒ, ಯುರೋಪ್ ಔಷಧ ನಿಯಂತ್ರಕ ತುರ್ತು ಸಭೆ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 16: ಆ್ಯಸ್ಟ್ರಝೆನೆಕ ಕಂಪೆನಿಯ ಕೋವಿಡ್-19 ಲಸಿಕೆಯನ್ನು ಸ್ವೀಕರಿಸಿದ ಹಲವರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಂಡುಬಂದ ಬಳಿಕ, ಲಸಿಕೆಯ ಬಳಕೆಯನ್ನು 20ಕ್ಕೂ ಅಧಿಕ ದೇಶಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಈ ಪೈಕಿ ಹೆಚ್ಚಿನವು ಯುರೋಪ್ ದೇಶಗಳಾಗಿವೆ.
ಲಸಿಕೆಯನ್ನು ಸ್ಥಗಿತಗೊಳಿಸಿರುವ ದೇಶಗಳ ಪಟ್ಟಿಗೆ ಮಂಗಳವಾರ ಸ್ವೀಡನ್ ಮತ್ತು ಲಾತ್ವಿಯ ದೇಶಗಳು ಸೇರ್ಪಡೆಗೊಂಡಿವೆ.
ಈವರೆಗೆ ಆ್ಯಸ್ಟ್ರಝೆನೆಕ ಲಸಿಕೆಯನ್ನು ನಿಷೇಧಿಸಿರುವ ದೇಶಗಳು: ಸ್ವೀಡನ್, ಲಾತ್ವಿಯ, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಲಕ್ಸಂಬರ್ಗ್, ಸೈಪ್ರಸ್, ಪೋರ್ಚುಗಲ್, ಸ್ಲೊವೇನಿಯ, ಇಂಡೋನೇಶ್ಯ, ನೆದರ್‌ಲ್ಯಾಂಡ್ಸ್, ಐರ್‌ಲ್ಯಾಂಡ್, ಬಲ್ಗೇರಿಯ, ಕಾಂಗೊ, ಥಾಯ್ಲೆಂಡ್, ರೊಮೇನಿಯ, ಐಸ್‌ಲ್ಯಾಂಡ್, ಡೆನ್ಮಾರ್ಕ್, ನಾರ್ವೆ ಮತ್ತು ಆಸ್ಟ್ರಿಯ.
ಲಸಿಕೆಗೆ ಸಂಬಂಧಿಸಿದ ಲಭ್ಯವಿರುವ ಸುರಕ್ಷತಾ ಅಂಕಿಅಂಶಗಳನ್ನು ಪರೀಕ್ಷಿಸುವುದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಪರಿಣತರು ಮಂಗಳವಾರ (ಜಿನೀವ ಕಾಲಮಾನ) ಸಭೆ ಸೇರುತ್ತಿದ್ದಾರೆ. ಆದರೆ, ಲಸಿಕೆಯ ಸುರಕ್ಷತೆ ಬಗ್ಗೆ ಸಂಸ್ಥೆಯು ಈಗಾಗಲೇ ವಿಶ್ವಾಸ ವ್ಯಕ್ತಪಡಿಸಿದೆ.
ಈವರೆಗೆ ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟದಲ್ಲಿ 1.7 ಕೋಟಿಗೂ ಅಧಿಕ ಮಂದಿ ಆ್ಯಸ್ಟ್ರಝೆನೆಕ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಆ ಪೈಕಿ, ಕಳೆದ ವಾರದವರೆಗೆ 40ಕ್ಕಿಂತಲೂ ಕಡಿಮೆ ರಕ್ತಹೆಪ್ಪುಗಟ್ಟಿರುವ ಪ್ರಕರಣಗಳು ವರದಿಯಾಗಿವೆ ಎಂದು ಬ್ರಿಟಿಶ್-ಸ್ವೀಡಿಶ್ ಬಹುರಾಷ್ಟ್ರೀಯ ಕಂಪೆನಿಯಾಗಿರುವ ಆ್ಯಸ್ಟ್ರಝೆನೆಕ ಹೇಳಿದೆ.
ಈ ನಡುವೆ, ಲಸಿಕೆ ಸ್ವೀಕರಿಸಿದವರಲ್ಲಿ ಕಂಡುಬಂದಿರುವ ರಕ್ತಹೆಪ್ಪುಗಟ್ಟುವಿಕೆ ಸಮಸ್ಯೆ ಬಗ್ಗೆ ಚರ್ಚಿಸಲು ಯುರೋಪ್‌ನ ಔಷಧ ನಿಯಂತ್ರಕ ‘ಯುರೋಪಿಯನ್ ಮೆಡಿಸಿನ್ಸ್ ಏಜನ್ಸಿ (ಇಎಮ್‌ಎ)’ ಗುರುವಾರ ಸಭೆ ಸೇರಲಿದೆ.
ಲಸಿಕೆ ಸುರಕ್ಷಿತ: ಬ್ರಿಟನ್ ಪ್ರಧಾನಿ
ಲಂಡನ್, ಮಾ. 16: ಆ್ಯಸ್ಟ್ರಝೆನೆಕ ಕೊರೋನ ವೈರಸ್ ಲಸಿಕೆಯು ಸುರಕ್ಷಿತವಾಗಿದೆ ಎಂದು ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಮಂಗಳವಾರ ಹೇಳಿದ್ದಾರೆ.
‘‘ಲಸಿಕೆಯು ಸುರಕ್ಷಿತವಾಗಿದೆ ಹಾಗೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ’’ ಎಂದು ‘ದ ಟೈಮ್ಸ್’ ಪತ್ರಿಕೆಯಲ್ಲಿ ಬರೆದ ಲೇಖನವೊಂದರಲ್ಲಿ ಅವರು ಹೇಳಿದ್ದಾರೆ.
‘‘ಈ ಲಸಿಕೆಯನ್ನು ಬ್ರಿಟನ್, ಭಾರತದಿಂದ ಹಿಡಿದು ಅಮೆರಿಕದವರೆಗೆ ಹಲವು ಸ್ಥಳಗಳಲ್ಲಿ ಉತ್ಪಾದಿಸಲಾಗುತ್ತಿದೆ ಹಾಗೂ ಅದನ್ನು ಜಗತ್ತಿನಾದ್ಯಂತ ಬಳಸಲಾಗುತ್ತಿದೆ’’ ಎಂದು ಅವರು ಹೇಳಿದ್ದಾರೆ.







