ಪುದುಚೇರಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಜಿ ಸಿಎಂ ನಾರಾಯಣಸ್ವಾಮಿ ಹೆಸರಿಲ್ಲ

ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ನಡೆಯಲಿರುವ 2021ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಸ್ಪರ್ಧಿಸುವುದಿಲ್ಲ ಎಂದು ಪುದುಚೇರಿಯ ಅಖಿಲಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಉಸ್ತುವಾರಿ ದಿನೇಶ್ ಗುಂಡುರಾವ್ ಹೇಳಿದ್ದಾರೆ.
“ಮಾಜಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಪುದುಚೇರಿಯಲ್ಲಿ ನಡೆಯಲಿರುವ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅವರು ಚುನಾವಣಾ ಪ್ರಚಾರ ಹಾಗೂ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ'' ಎಂದು ರಾವ್ ಎಎನ್ ಐಗೆ ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷ ಪುದುಚೇರಿ ಅಸೆಂಬ್ಲಿ ಚುನಾವಣೆಗೆ 14 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪುದುಚೇರಿಯ 30 ಸದಸ್ಯ ಬಲದ ವಿಧಾನಸಭೆಗೆ ಎಪ್ರಿಲ್ 6ರಂದು ಚುನಾವಣೆ ನಡೆಯಲಿದೆ.
30 ಸದಸ್ಯ ಬಲದ ವಿಧಾನಸಭೆಯಲ್ಲಿ ಐದು ಸೀಟುಗಳು ಎಸ್‍ಸಿ ಅಭ್ಯರ್ಥಿಗಳಿಗೆ ಮೀಸಲಾಗಿದೆ.
ನಾರಾಯಣ ಸ್ವಾಮಿ ನೇತೃತ್ವದ ಕಾಂಗ್ರೆಸ್ 5 ವರ್ಷವನ್ನು ಪೂರ್ಣಗೊಳಿಸುವ ಮೊದಲೇ ಪತನಗೊಂಡಿತ್ತು. ಫೆಬ್ರವರಿ 22ರಂದು ಬಹುಮತ ಸಾಬೀತಿಗೆ ಮೊದಲೇ ನಾರಾಯಣಸ್ವಾಮಿ ರಾಜೀನಾಮೆ ನೀಡಿದ್ದರು.
2016ರ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಅಖಿಲ ಭಾರತ ಎನ್ ಆರ್ ಕಾಂಗ್ರೆಸ್ 8 ಸೀಟುಗಳು, ಎಐಎಡಿಎಂಕೆ 4 ಸ್ಥಾನಗಳನ್ನು ಗೆದ್ದರೆ, ಡಿಎಂಕೆ ಎರಡು ಸ್ಥಾನಗಳನ್ನು ಜಯಿಸಿದ್ದವು. ಬಿಜೆಪಿ ಒಂದೂ ಸೀಟು ಗೆದ್ದಿರಲಿಲ್ಲ.







