ಹರಿದ ಜೀನ್ಸ್ ಧರಿಸಿ ಮೊಣಕಾಲುಗಳನ್ನು ತೋರಿಸುವುದು ಯಾವ ಸಂಸ್ಕೃತಿ?: ಉತ್ತರಾಖಂಡ ಸಿಎಂ

ತೀರತ್ ಸಿಂಗ್ ರಾವತ್ (Photo : Twitter)
ಡೆಹ್ರಾಡೂನ್: ಯುವಕ ಯುವತಿಯರು ರಿಪ್ಡ್ (ಹರಿದ ರೀತಿಯ) ಜೀನ್ಸ್ ಧರಿಸುವುದು ಹಾಗೂ ತಮ್ಮ ಮೊಣಕಾಲುಗಳನ್ನು ಪ್ರದರ್ಶಿಸಿ ಶ್ರೀಮಂತ ಮಕ್ಕಳಂತೆ ತೋರ್ಪಡಿಸಿಕೊಳ್ಳುವುದು 'ಕ್ಯಾಂಚಿ ಸೆ ಸಂಸ್ಕಾರ್' (ಕತ್ತರಿಯ ಸಂಸ್ಕೃತಿ), ಎಂದು ಉತ್ತರಾಖಂಡದ ನೂತನ ಸಿಎಂ ತೀರತ್ ಸಿಂಗ್ ರಾವತ್ ಹೇಳಿದ್ದಾರೆ.
"ಇಂತಹ ಮೌಲ್ಯಗಳನ್ನು ಇಂದಿನ ಯುವಜನರಿಗೆ ನೀಡಲಾಗುತ್ತಿದೆ. ಮನೆಯಲ್ಲಲ್ಲದೆ ಬೇರೆಲ್ಲಿಂದ ಇದು ಬರುತ್ತದೆ? ಶಿಕ್ಷಕರ ಅಥವಾ ಶಾಲೆಗಳ ತಪ್ಪೇನಿದೆ? ಹರಿದ ಜೀನ್ಸ್ ಹಾಗೂ ಮೊಣಕಾಲನ್ನು ತೋರಿಸುತ್ತಿರುವ ನಮ್ಮ ಮಕ್ಕಳನ್ನು ನಾವು ಎತ್ತ ಒಯ್ಯುತಿದ್ದೇವೆ? ಹುಡುಗಿಯರೇನೂ ಕಡಿಮೆಯಿಲ್ಲ. ಇದು ಒಳ್ಳೆಯದೇ? ಪಾಶ್ಚಾತ್ಯೀಕರಣದ ಹುಚ್ಚಿನಿಂದ ಇದೆಲ್ಲಾ ಆಗುತ್ತಿದೆ. ಅತ್ತ ಪಾಶ್ಚಿಮಾತ್ಯ ಜಗತ್ತು ನಮ್ಮನ್ನು ಅನುಕರಿಸುತ್ತಿದೆ, ಅವರು ಯೋಗ ಮಾಡುತ್ತಿದ್ದಾರೆ ಹಾಗೂ ದೇಹವನ್ನು ಸರಿಯಾಗಿ ಮುಚ್ಚುಕೊಳ್ಳುತ್ತಾರೆ ಆದರೆ ನಾವು ನಗ್ನತೆ ಕಡೆಗೆ ಓಡುತ್ತಿದ್ದೇವೆ,'' ಎಂದು ಉತ್ತರಾಖಂಡ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಡೆಹ್ರಾಡೂನ್ನಲ್ಲಿ ಆಯೋಜಿಸಿದ ಎರಡು ದಿನಗಳ ಅಮಲು ವ್ಯಸನ ಕುರಿತಾದ ಕಾರ್ಯಾಗಾರದಲ್ಲಿ ಅವರು ಹೇಳಿದರು.
ಹರಿದ ಜೀನ್ಸ್ ಧರಿಸಿದ್ದ ಹಾಗೂ ಎನ್ಜಿಒ ಒಂದನ್ನು ನಡೆಸುತ್ತಿದ್ದ ಮಹಿಳೆಯನ್ನು ಭೇಟಿಯಾದಾಗ ಆಘಾತವಾಯಿತು. "ಈ ರೀತಿ ಮಹಿಳೆಯೊಬ್ಬರು ಸಮಾಜದಲ್ಲಿ ತಿರುಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಾರೆಂದಾದರೆ ನಾವು ಸಮಾಜಕ್ಕೆ ನಮ್ಮ ಮಕ್ಕಳಿಗೆ ಯಾವ ರೀತಿಯ ಸಂದೇಶ ನೀಡುತ್ತಿದ್ದೇವೆ. ಎಲ್ಲವೂ ಮನೆಯಿಂದಲೇ ಆರಂಭಗೊಳ್ಳುತ್ತದೆ. ನಾವು ಮಾಡುವುದನ್ನೇ ನಮ್ಮ ಮಕ್ಕಳು ಅನುಸರಿಸುತ್ತಾರೆ, ಮನೆಯಲ್ಲಿ ಸರಿಯಾದ ಸಂಸ್ಕೃತಿಯನ್ನು ಕಲಿಸಲ್ಪಟ್ಟ ಮಗು ಎಷ್ಟೇ ಆಧುನಿಕ ಮನೋಭಾವದವನಾದರೂ ಜೀವನದಲ್ಲಿ ಯಾವತ್ತೂ ವಿಫಲನಾಗುವುದಿಲ್ಲ,'' ಎಂದು ಅವರು ಹೇಳಿದರು.







