ಬೆಂಗಳೂರು ಝೊಮಾಟೋ ಪ್ರಕರಣ: ಎಫ್‍ಐಆರ್ ದಾಖಲಾದ ಬೆನ್ನಲ್ಲೆ ಯುವತಿ ನಾಪತ್ತೆ

ಬೆಂಗಳೂರು, ಮಾ.17: ಹಲ್ಲೆ ಆರೋಪ ಸಂಬಂಧ ಝೊಮಾಟೋ ಡೆಲಿವರಿ ಬಾಯ್ ಕಾಮರಾಜ್ ಅವರ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾದ ಬೆನ್ನಲ್ಲೇ ಯುವತಿ ಹಿತೇಶಾ ಚಂದ್ರಾನಿ ನಾಪತ್ತೆಯಾಗಿದ್ದಾಳೆ.
ಆಹಾರ ಡೆಲಿವರಿ ವಿಳಂಬವನ್ನು ಪ್ರಶ್ನಿಸಿ, ಕಾಮರಾಜ್ ಹಲ್ಲೆ ನಡೆಸಿದ್ದಾರೆಂದು ಹಿತೇಶಾ ಚಂದ್ರಾನಿ ಅವರು ಆರೋಪಿಸಿದ್ದರು. ಆದರೆ ಈ ಆರೋಪವನ್ನು ನಿರಾಕರಿಸಿದ್ದ ಕಾಮರಾಜ್ ಅವರು, ಸುಳ್ಳು ಆರೋಪಗಳನ್ನು ಮಾಡಿ, ಉದ್ಯೋಗಕ್ಕೆ ನಷ್ಟ ತಂದಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
'ದೂರು ಹಿನ್ನೆಲೆಯಲ್ಲಿ ಪೊಲೀಸರು ಹಿತೇಶಾ ಚಂದ್ರಾನಿಯನ್ನು ಸಂಪರ್ಕಿಸಲು ಯತ್ನಿಸಿದ್ದು, ಈ ವೇಳೆ ಆಕೆ ನಾಪತ್ತೆಯಾಗಿರುವ ಮಾಹಿತಿ ಗೊತ್ತಾಗಿದೆ. ಇನ್ನು, ಆಕೆ ಮಹಾರಾಷ್ಟ್ರದಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಇದ್ದಾರೆಂದು ತಿಳಿದುಬಂದಿದೆ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರಕ್ಕೆ ಬಂದ ಕೂಡಲೇ ಹೇಳಿಕೆ ನೀಡುವಂತೆ ಮಹಿಳೆಗೆ ಸೂಚನೆ ನೀಡಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿಯಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.







